ನವದೆಹಲಿ: ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ನ ಅಂಗಸಂಸ್ಥೆ ಜಾನ್ಸೆನ್ ಉತ್ಪಾದಿಸಿರುವ ಕೋವಿಡ್ -19 ಲಸಿಕೆ ಮುಂದಿನ ತಿಂಗಳು ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ.
ಪ್ರತಿ ಡೋಸ್ ಗೆ ಸುಮಾರು 2,000 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಈ ಲಸಿಕೆಯ ಮಹತ್ವವೆಂದರೆ ಇದು ಒಂದು ಡೋಸ್ ತೆಗದುಕೊಂಡರೆ ಸಾಕು. ಅಲ್ಲದೆ ಇದನ್ನು ಸಾಮಾನ್ಯ ರೆಫ್ರಿಜರೇಟರ್‌ಗಳಲ್ಲಿ ಮೂರು ತಿಂಗಳವರೆಗೆ ಸಂಗ್ರಹಿಸಬಹುದು. ಈ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ $25 ಅಥವಾ 1855 ರೂ. ಆಗಿರಲಿದೆ. ಜಿಎಸ್‌ಟಿ ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳು 150 ರೂ. ವಿಧಿಸಲಿದೆ.
ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ಲಸಿಕೆ ಪ್ರಯೋಗಗಳಲ್ಲಿ ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ 66.3ರಷ್ಟು ಪರಿಣಾಮಕಾರಿ ಎಂಬುದು ದೃಢಪಟ್ಟಿದ್ದು, ಲಸಿಕೆ ಪಡೆದ ಎರಡು ವಾರಗಳ ನಂತರ ಪ್ರತಿಕಾಯ ಸೃಷ್ಟಿಸುತ್ತದೆ.
ನಾವು ಈ ಲಸಿಕೆಯನ್ನು ಭಾರತದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ನೀಡಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಮೊದಲು ಭಾರತದಲ್ಲಿ ಈ ಲಸಿಕೆಗಾಗಿ ಪೂರೈಕೆ ಮಾರ್ಗವನ್ನು ಸ್ಥಾಪಿಸುವುದು ಮತ್ತು ಪರಿಶೀಲಿಸುವುದು ಇದರ ಉದ್ದೇಶವಾಗಿದೆ ಎಂದು ಭಾರತದ ಖಾಸಗಿ ಆಸ್ಪತ್ರೆ ಸಂಘದ ಮಹಾನಿರ್ದೇಶಕ ಗಿರ್ಧರ್ ಜೆ ಗಯಾನಿ ಹೇಳಿದರು.
ವಿಶೇಷವಾಗಿ ಈ ಲಸಿಕೆ ಭಾರತಕ್ಕೆ ಸೂಕ್ತವಾಗಬಹುದು. ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇತ್ತೀಚೆಗೆ, ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಡಬ್ಲ್ಯುಎಚ್‌ಒ ಅನುಮೋದಿಸಿದ ವಿದೇಶಿ ನಿರ್ಮಿತ ಕೋವಿಡ್ 19 ಲಸಿಕೆಯನ್ನು ಬ್ರಿಡ್ಜಿಂಗ್ ಕ್ಲಿನಿಕಲ್ ಪ್ರಯೋಗಗಳಿಲ್ಲದೆ ಭಾರತದಲ್ಲಿ ಬಳಸಲು ಭಾರತ ಸರ್ಕಾರ ನಿಯಂತ್ರಕ ಮಾನದಂಡಗಳನ್ನು ಸಡಿಲಗೊಳಿಸಿತ್ತು.