ನವದೆಹಲಿ: ಇದು ಹಣಕಾಸು ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವ ಜನಪ್ರತಿನಿಧಿಗಳಿಗಂತೂ ಶಾಕಿಂಗ್ ಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಹೊಸ ಕ್ರಮ ಕೆಲವು ಹಣಕಾಸು ಸಂಸ್ಥೆಗಳ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ತರಲಿದ್ದರೆ, ಅಂಥ ಸಂಸ್ಥೆಗಳ ಚುಕ್ಕಾಣಿ ಹಿಡಿದು ಲಾಭ ಮಾಡಿಕೊಳ್ಳಲು ಅಥವಾ ಭ್ರಷ್ಟಾಚಾರ ನಡೆಸಲು ಹವಣಿಸುವ ಜನಪ್ರತಿನಿಧಿಗಳಿಗೆ ಇದು ದೊಡ್ಡ ತಡೆಯನ್ನೇ ಒಡ್ಡಲಿದೆ.
ಆರ್ಬಿಐನ ಈ ಕ್ರಮದ ಪರಿಣಾಮವಾಗಿ ಇನ್ನು ಪ್ರಾಥಮಿಕ ಪಟ್ಟಣ ಸಹಕಾರಿ ಬ್ಯಾಂಕ್ಗಳಲ್ಲಿ ಯಾರ್ಯಾರೋ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾಯಂ ನಿರ್ದೇಶಕರಾಗುವಂತಿಲ್ಲ. ಇಂಥ ಕೋಆಪರೇಟಿವ್ ಬ್ಯಾಂಕ್ಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗುವವರಿಗೆ ವಿದ್ಯಾರ್ಹತೆಯನ್ನೂ ಸೂಚಿಸಿರುವ ಆರ್ಬಿಐ, ಸಂಸದ-ಶಾಸಕ ಹಾಗೂ ನಗರಸಂಸ್ಥೆಗಳ ಜನಪ್ರತಿನಿಧಿಗಳು ಇವುಗಳಲ್ಲಿ ಎಂಡಿ ಆಗುವ ಹಾಗಿಲ್ಲ ಎಂದು ಹೇಳಿದೆ.
ಅಲ್ಲದೆ ಇಂಥ ಹಣಕಾಸು ಸಂಸ್ಥೆಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ, ಕಾಯಂ ನಿರ್ದೇಶಕ ಆಗುವವರು ಸ್ನಾತಕೋತ್ತರ ಪದವಿ ಅಥವಾ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು ಎಂದು ಹೇಳಿದೆ. ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಿಚ್ಛಿಸುವವರು ಚಾರ್ಟರ್ಡ್/ಕಾಸ್ಟ್ ಅಕೌಂಟೆಂಟ್, ಎಂಬಿಎ ಫೈನಾನ್ಸ್ ಇಲ್ಲವೇ ಬ್ಯಾಂಕಿಂಗ್ ಅಥವಾ ಕೋ-ಆಪರೇಟಿವ್ ಬಿಸಿನೆಸ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದಂತೆ ಡಿಪ್ಲೊಮಾ ಮಾಡಿರಬೇಕು. ಮಾತ್ರವಲ್ಲ, ಅಂಥವರು 35 ವರ್ಷಕ್ಕೆ ಚಿಕ್ಕವರಾಗಿರಬಾರದು ಹಾಗೂ 70 ವರ್ಷ ಮೇಲ್ಪಟ್ಟವರಾಗಿರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಹೀಗೆ ಎಂಡಿ, ಕಾಯಂ ಎಂಡಿ ಆಗಿ ನೇಮಕಗೊಂಡವರು ಆ ಹುದ್ದೆಗಳಲ್ಲಿ ಸತತ 15 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಮುಂದುವರಿಯಬಾರದು. ಒಂದು ವೇಳೆ ಮುಂದುವರಿಸಲೇಬೇಕು ಎಂದರೆ 3 ವರ್ಷಗಳ ಬಿಡುವಿನ ಬಳಿಕ ಮುಂದುವರಿಸಬಹುದು ಎಂಬುದು ಸೇರಿದಂತೆ ಇನ್ನೂ ಹಲವಾರು ನಿಯಮಗಳನ್ನು ಆರ್ಬಿಐ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.