ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿಯ ಗೋಳಿಯಡ್ಕ ಪರಿಶಿಷ್ಟ ಜಾತಿ ಕಾಲನಿಯಲ್ಲಿ ನೀರಿನ ಟ್ಯಾಂಕ್‍ನ ಅಡಿಯಲ್ಲಿ ವಾಸಿಸುತ್ತಿರುವ ಸುಂದರ ಎಂಬವರ ಬಡಕುಟುಂಬಕ್ಕೆ ಬಿಜೆಪಿ ವತಿಯಿಂದ ನೆರವನ್ನು ನೀಡಲಾಯಿತು. ಮೋದಿ ನೇತೃತ್ವದ ಸರ್ಕಾರದ ಏಳನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವವನ್ನು ನೀಡಿದ್ದರು. ಸೇವಾಭಾರತಿ ಹಾಗೂ ಅಭಯ ಸೇವಾನಿಧಿ ಬದಿಯಡ್ಕ ಇದರ ನೇತೃತ್ವದಲ್ಲಿ ಸುಂದರರ 10 ಸೆಂಟ್ಸ್ ಸ್ಥಳದಲ್ಲಿ ನಿರ್ಮಿಸುತ್ತಿರುವ ನೂತನ ಮನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅದಕ್ಕಾಗಿ ಪಕ್ಷದ ವತಿಯಿಂದ 1 ಲೋಡ್ ಮರಳು ಹಾಗೂ 10 ಚೀಲ ಸಿಮೆಂಟನ್ನು ನೀಡಲಾಯಿತು. ಕೆ.ಶ್ರೀಕಾಂತ್ ಅವರು ಸೇವಾ ಭಾರತಿಯ ಕಾರ್ಯಕರ್ತರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಡಕುಟುಂಬಕ್ಕೆ ನೆರವಾದ ಸೇವಾಭಾರತಿ :
ಸೇವಾಭಾರತಿ ಮತ್ತು ಅಭಯ ಸೇವಾನಿಧಿ ಬದಿಯಡ್ಕ ಇದರ ನೇತೃತ್ವದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಸಾಮಾಜಿಕ ಜಾಲತಾಣದಲ್ಲಿ ಸಹಾಯವನ್ನು ಅಪೇಕ್ಷಿಸಲಾಗಿದ್ದು, ನೂರಾರು ದಾನಿಗಳು ತಮ್ಮ ಸಹಾಯವನ್ನು ಒದಗಿಸಿರುತ್ತಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಕೊನೆಯ ಹಂತದ ಕಾಮಗಾರಿಗೆ ಇನ್ನೂ ಹೆಚ್ಚಿನ ನೆರವನ್ನು ನಿರೀಕ್ಷಿಸಲಾಗಿದೆ. ಸುಂದರ ಮತ್ತು ಜಯಂತಿ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ನೀರಿನ ಟ್ಯಾಂಕ್‍ನ್ನೇ ಆಶ್ರಯತಾಣವನ್ನಾಗಿಸಿಕೊಂಡಿದ್ದಾರೆ. 7 ವರ್ಷ ಪ್ರಾಯದ ಪುತ್ರಿ, 5 ವರ್ಷ ಪ್ರಾಯದ ವಿಕಲಚೇತನ ಪುತ್ರನೊಂದಿಗೆ ಕಷ್ಟಪಟ್ಟು ಜೀವನವನ್ನು ಸಾಗಿಸಬೇಕಾದ ಪರಿಸ್ಥಿತಿ ಅವರ ಮುಂದಿದೆ. ದಿನಗೂಲಿಯಲ್ಲಿ ಸಿಕ್ಕ ಹಣದಿಂದ ಹೇಗೋ ಬದುಕಿಕೊಂಡಿದ್ದಾರೆ. ಕುಟುಂಬವು ಅಂಗವೈಕಲ್ಯದಿಂದ ಬಳಲುತ್ತಿರುವ ಮಗನೊಂದಿಗೆ ಕಷ್ಟ ಪಟ್ಟು ಜೀವಿಸುತ್ತಿದೆ.
ನೆರವು ನೀಡುವವರು ಜಯಂತಿ, ಖಾತೆ ಸಂಖ್ಯೆ 40617101084382, ಐಎಫ್ ಸಿ ಸಂಖ್ಯೆ: ಕೆ.ಎಲ್.ಜಿ.ಬಿ.0040617, ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆಗೆ ಜಮೆ ಮಾಡಲು ವಿನಂತಿಸಲಾಗಿದೆ.