ಏನೇ ಹೇಳಿ, ಈ ಬಾರಿ ಮುಂಗಾರು ಸಮಯಕ್ಕೆ ಸರಿಯಾಗಿ ಆಗಮಿಸಿದರೂ ಸಾಕಷ್ಟು ಮಳೆ ಈವರೆಗಂತೂ
ಆಗಿಲ್ಲ. ಹೊಳೆ, ನದಿ, ಕೊಳ್ಳಗಳ ಕಸಗಳು ಪ್ರವಾಹದಲ್ಲಿ ಇನ್ನೂ ಕೊಚ್ಚಿಹೋಗಿಲ್ಲ. ಬಹುಷಃ
ಈ ಕಸ-ಕೊಚ್ಚೆಗಳು ಸರಿಯಾದ ಕಾಲಕ್ಕೆ ಪ್ರಾಕೃತಿಯಾಗಿ ವಿಲೇವಾರಿಯಾಗದಿದ್ದರೆ ರೋಗ
ರುಜಿನಗಳು, ಸಾಂಕ್ರಾಮಿಕಗಳ ಕೊಯ್ಲು ಎಂಬುದರಲ್ಲಿ ಸಂಶಯವೇ ಇಲ್ಲ. ಇಂದಿನ ಕೋವಿಡ್
ಯುಗದಲ್ಲಿ ನೈರ್ಮಲ್ಯತೆಗೆ ಹೆಚ್ಚು ಆದ್ಯತೆ ಖಂಡಿತಾ ಬೇಕು. ಅದಿಲ್ಲದಿದ್ದರೆ
ಕೊರೊನಾದಂತಹ ಅಥವಾ ಅದಕ್ಕಿಂತ ಎರಡು ಪಟ್ಟು ಭೀಕರದ ಮತ್ತೊಂದು ವೈರಾಸುರನ ಆವಿರ್ಭಾವ
ಖಂಡಿತ.
ಏನು...ಚಾದ ಬಗ್ಗೆ ಮಾತಿನ ಮಧ್ಯೆ ಬರೇ ಕೊಚ್ಚೆಯಂತಹ ಚಹಾ ಕುಡಿಸುತ್ತೀರಾ ಎಂದು ಭಾವಿಸಿದಿರಾ.ಅಲ್ಲವೇ ಅಲ್ಲ.
ಸಾಮಾನ್ಯವಾಗಿ ಚಹಾ ಮಾಡುವುದೊಂದು ಕಲೆಯೆಂದು ಆರ್ಕಿಮಿಡೀಸ್ ಅಲ್ಲ. ಯಾವ ಹಳ್ಳಿ
ಹೈದನೂ ಹೇಳ್ಯಾನು. ನಾಲಿಗೆಗೆ ರುಚಿಸದ ಚಹಾ ತೇರಿಕೆ ತರಿಸಿ ಮೂಡ್ ಔಟ್ ಮಾಡದಿರದು. ಚಹಾ
ಮಾಡುವುದೂ ಒಂದು ಕಲೆ. ಹಾಗೆಂದು ಅದು ಸ್ತ್ರೀಯರಿಗೆ ಮಾತ್ರ ವಶಗೊಂಡ ಕಲೆಯೆಂದು
ಭಾವಿಸಬೇಡಿ. ಆಯ್ತಾ. ಪುರುಷರಲ್ಲೂ ಅನೇಕಾನೇಕ ಮಹನೀಯರು ಚಹಾದಲ್ಲಿ ಎತ್ತಿದ ಕೈ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪುರುಷರೇ ಚಹಾ ಮಾಡುವುದೆಂಬುದನ್ನು ಮರಿಬೇಡಿ
ಆಯ್ತಾ. ಇಲ್ಲೀಗ ಕಾಸರಗೋಡು ಜಿಲ್ಲೆಯ ನೀರ್ಚಾಲು ಎಂಬ ಈಗತಾನೆ ಬೆಳೆಯುತ್ತಿರುವ ಪುಟ್ಟ
ಊರಿನಲ್ಲಿರುವ ಹೋಟೆಲ್ ದುರ್ಗಾಭವನದ ಚಹಾ ರುಚಿ ಓದುಗರಿಗೆ...ಇಂದೀಗ.
ಕಳೆದ 35 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ನೀರ್ಚಾಲಲ್ಲಿ ಶ್ರೀದುರ್ಗಾ ಭವನ ಹೋಟೆಲ್
ನಡೆಸುತ್ತಿರುವ ಕಿಳಿಂಗಾರು ಮೂಲದ ಬಾಲಕೃಷ್ಣ ಭಟ್ ಅವರ ಚಹಾ ಸಹಿತ ಸವಿ ರುಚಿಯ
ಆಹಾರೋತ್ಪನ್ನ ಜನಜನಿತ...ಹಾಗಿದ್ದರೆ ಅವರಿಂದಲೇ ಕೇಳೋಣ ಚಹಾದ ಬಗೆಗಿನ ಇಂದಿನ
ವಿಶೇಷತೆಗಳನ್ನು......
ಜೊತೆಗೆ ನಾನು ನನ್ನದೇ
ಅನುಭವದಿಂದ ಒಳ್ಳೆಯ ಶ್ರೇಷ್ಠ ಚಹಾ ಮಾಡೋದು ಹೇಗೆ ಅಂತ ಕಂಡುಕೊಂಡಿದ್ದೇನೆ. ಆ ಬಗ್ಗೆ
ಹನ್ನೊಂದು ಗಮನಾರ್ಹ ಅಂಶಗಳನ್ನು ಗುರುತಿಸಿದ್ದೇನೆ. ಇವುಗಳಲ್ಲಿ ಒಂದೆರಡು ಎಲ್ಲರೂ
ಒಪ್ಪಬಹುದಾದ ಸಾಮಾನ್ಯ ಹೇಳಿಕೆಗಳು, ನಾಲ್ಕೈದಂತೂ ಖಂಡಿತಾ ವಿವಾದಾಸ್ಪದ ಅಂಶಗಳು.
ಕೆಲವನ್ನು ತಿದ್ದಬೇಕು, ಮತ್ತು ಕೆಲವನ್ನು ತೀಡಬೇಕು...ಬಿಸಿ ಬಿಸಿ ಚಹಾದೊಂದಿಗೆ.
1.
ಮೊದಲನೆಯದಾಗಿ ಒಳ್ಳೆಯ ಚಹಾ ಬೇಕೆಂದಿದ್ದರೆ ಭಾರತೀಯ ಅಥವಾ ಶ್ರೀಲಂಕಾ
ಚಹಾಪುಡಿಯನ್ನೇ ಬಳಸಬೇಕು. ಚೀನಾದ ಟೀಪುಡಿಗೂ ಕೆಲವು ಹೆಗ್ಗಳಿಕೆಗಳಿವೆ ನಿಜ. ಅದು ಅಗ್ಗ,
ಹಾಲು ಬೆರೆಸದೇ ಕುಡಿಯಬಹುದು ಎನ್ನುವುದೆ ಹೊರತಾಗಿಯೂ ಚೀನಾ ಟೀಪುಡಿಗೆ ನಿಮ್ಮನ್ನು
ಕೆರಳಿಸುವ ಶಕ್ತಿಯಿಲ್ಲ. ಅದನ್ನು ಕುಡಿದು ವಿವೇಕಿಯಾದೆ, ಬಲಶಾಲಿಯಾದೆ ಅಥವಾ
ಆಶಾವಾದಿಯಾದೆ ಅಂತಂದುಕೊಳ್ಳಲು ಸಾಧ್ಯವೇ ಇಲ್ಲ. ಯಾರಾದರೂ ಒಳ್ಳೆಯ ಚಹಾ ಕುಡಿದೆ ಕಣಯ್ಯಾ
ಎಂದರೆ ಅದು ಇಂಡಿಯನ್ ಟೀಯೇ ಆಗಿರಬೇಕು.
2. ಚಹಾವನ್ನು ಸಣ್ಣ
ಪ್ರಮಾಣದಲ್ಲಿ ಮಾಡಬೇಕು. ದೊಡ್ಡ ಹಂಡೆಯಲ್ಲೋ ತಪ್ಪಲೆಯಲ್ಲೋ ಕಾಯಿಸಿಟ್ಟ ಟೀಗೆ
ರುಚಿಯಿಲ್ಲ. ಮದುವೆಮನೆಯಲ್ಲೋ, ಸಾರ್ವಜನಿಕ ಸಮಾರಂಭಗಳಲ್ಲೋ ಮಾಡುವ ಚಹಾ ಮಾಡುವ ಪಾತ್ರೆ
ಚೀನಾದ್ದೇ ಆಗಿದ್ದರೆ ಒಳ್ಳೆಯದು. ಸ್ಪೀಲು ಅಥವಾ ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಾಡೋ
ಟೀಗೆ ಅಂಥ ಸ್ವಾದ ಬರುವುದಿಲ್ಲ.
3. ಟೀ ತಯಾರಿಸುವ ಮುಂಚೆಯೇ
ಟೀಪಾಟನ್ನು ಬಿಸಿ ಮಾಡಿಕೊಳ್ಳಬೇಕು. ಬಿಸಿನೀರಲ್ಲಿ ಅದ್ದಿ ಬೆಚ್ಚಗಾಗಿಸುವುದಕ್ಕಿಂತ
ಹಬೆಯ ಮೇಲಿಟ್ಟು ಬಿಸಿಮಾಡುವುದು ಉತ್ತಮ.
4. ಚಹಾ ಸ್ಟ್ರಾಂಗ್
ಆಗಿರಬೇಕು. ಒಂದು ಕಪ್ ಚಹಾಕ್ಕೆ ಒಂದು ತುಂಬಿದ ಚಮಚ ಟೀಪೌಡರ್ ಸರಿ. ಇಪ್ಪತ್ತು ಪೇಲವ
ಚಹಾಕ್ಕಿಂತ ಒಂದು ಸ್ಟ್ರಾಂಗ್ ಟೀ ಮೇಲು. ವಯಸ್ಸಾಗುತ್ತಾ ಹೋದ ಹಾಗೆ ಚಹಾ ಪ್ರೇಮಿಗಳು -
ಹೆಚ್ಚು ಸ್ಟಾಂಗ್ ಚಹಾ ಕುಡಿಯುವುದಕ್ಕೆ ಆರಂಭಿಸುತ್ತಾರೆ.
5. ಚಹಾವನ್ನು
ಸೋಸಬಾರದು. ಟೀಪಾಟ್ ನಿಂದ ನೇರವಾಗಿ ಕಪ್‍ಗೆ ಸುರಿಯಬೇಕು. ಒಂದೆರಡು ಚಹಾ ಸೊಪ್ಪು
ಟೀಯೊಳಗೆ ಬಿದ್ದರೂ ಪ್ರಮಾದವೇನಿಲ್ಲ. ಆದರೆ ಸೋಸುವುದಿದೆ ನೋಡಿ; ಮಹಾಪರಾಧ.
6.
ಚಹಾ ಪಾತ್ರೆಯನ್ನು ಕುದಿಯುವ ನೀರಿನ ಬಳಿ ಒಯ್ಯಬೇಕೇ ಹೊರತು, ಕುದಿಸಿದ ನೀರನ್ನು
ಚಹಾಪಾತ್ರೆಯ ಬಳಿಗೆ ತರಕೂಡದು. ಟೀಪಾತ್ರೆಯೊಳಗೆ ಸುರಿಯುವ ನೀರು ಕೊನೆಯ ಕ್ಷಣದ ತನಕವೂ
ಕುದಿಯುತ್ತಲೇ ಇರಬೇಕು. ಒಮ್ಮೆ ಕುದಿಸಿದ ನೀರನ್ನು ಮತ್ತೆ ಕುದಿಸಿ ಬಳಸಬಾರದು
ಅನ್ನುವುದು ಒಂದು ಮತ. ನನಗದರಲ್ಲಿ ನಂಬಿಕೆಯಿಲ್ಲ.
7. ಟೀಪಾತ್ರೆಗೆ
ಟೀಪುಡಿ ಹಾಕಿ ಕುದಿಯುವ ನೀರು ಹಾಕಿದ ನಂತರ ಅದನ್ನು ಕದಡಬೇಕು. ಪಾತ್ರೆಯನ್ನು
ಅಲ್ಲಾಡಿಸಿದರೂ ಸರಿಯೇ, ಆಮೇಲೆ ಚಹಾ ಎಲೆಗಳು ತಳದಲ್ಲಿ ನೆಲೆಗೊಳ್ಳಲು ಬಿಡಬೇಕು.
8.
ಆಳವಿಲ್ಲದ, ಕುಳ್ಳಗಿನ ಕಪ್‍ನಲ್ಲಿ ಟೀ ಕುಡಿಯಬಾರದು. ಆಳದ ಬ್ರೇಕ್‍ಫಾಸ್ಟ್ ಕಪ್
ವಾಸಿ. ಇದರಲ್ಲಿ ಹೆಚ್ಚು ಚಹಾ ಹಿಡಿಸುತ್ತದೆ. ಸಣ್ಣ ಕಪ್‍ಗಳಲ್ಲಿ ಚಹಾ ಕುಡಿಯುವುದಕ್ಕೆ
ಶುರುಮಾಡುವ ಮೊದಲೇ ಅರ್ಧ ತಣ್ಣಗಾಗಿರುತ್ತದೆ.
9. ಹಾಲು ಬೆರೆಸುವ ಮುನ್ನ ಕೆನೆ ತೆಗೆದಿರಬೇಕು. ಕೆನೆಯಿರುವ ಹಾಲಿನಿಂದಾಗಿ, ಚಹಾ ಅಂಟಂಟಂಟಾಗುತ್ತದೆ.
10.
ಟೀ ಪಾಟ್‍ನಿಂದ ಮೊದಲು ಟೀಯನ್ನು ಕಪ್‍ಗೆ ಸುರಿಯಬೇಕು. ವಿವಾದಾತ್ಮಕ ಅಂಶವೆಂದರೆ
ಇದೇ. ಹಲವಾರು ಮಂದಿ ಮೊದಲು ಹಾಲು ಹಾಕಿಕೊಂಡು ಅದರ ಮೇಲೆ ಚಹಾ ಸುರಿಯಬೇಕು ಎಂದು
ವಾದಿಸುತ್ತಾರೆ. ನನ್ನ ವಾದವೇ ಸರಿ ಯಾಕೆಂದರೆ ಮೊದಲು ಚಹಾ ಸುರಿದುಕೊಂಡರೆ ಆಮೇಲೆ ಎಷ್ಟು
ಬೇಕೋ ಅಷ್ಟು ಹಾಲು ಸುರಿಯಬಹುದು. ಮೊದಲು ತುಂಬಾ ಹಾಲು ಸುರಿದಿಟ್ಟರೆ ಚಹಾ ಕೆಟ್ಟು
ಹೋಗುತ್ತದೆ.
11. ಕೊನೆಯದಾಗಿ, ಎಲ್ಲಕ್ಕಿಂತ ಮುಖ್ಯವಾಗಿ, ರಷ್ಯನ್ ಶೈಲಿಯ ಚಹಾವೊಂದನ್ನು ಬಿಟ್ಟು ಉಳಿದೆಲ್ಲ ಟೀಯನ್ನು ಸಕ್ಕರೆ ಬೆರೆಸದೆ ಕುಡಿಯಬೇಕು. ಈ ಮಟ್ಟಿಗೆ ನಾನು ಅಲ್ಪಸಂಖ್ಯಾತನೇ ಇರಬಹುದು. ಆದರೆ, ಸಕ್ಕರೆ ಬೆರೆಸಿ ಚಹಾದ ಸ್ವಾದವನ್ನು ಕೆಡಿಸುವವರನ್ನು ಚಹಾಪ್ರಿಯರೆಂದು ನಾನು ಹೇಗೆ ಕರೆಯಲಿ?
ಚಹಾ ಕಹಿಯಾಗಿಯೇ ಇರಬೇಕು, ಬಿಯರಿನಂತೆ. ಅದಕ್ಕೆ ಸಕ್ಕರೆ ಬೆರೆಸಿಕೊಂಡಿರೋ ನೀವು ರುಚಿಸುವುದು ಟೀಯನ್ನಲ್ಲ, ಸಕ್ಕರೆಯನ್ನು, ಅದರ ಬದಲು ಬಿಸಿನೀರಿಗೆ ಸಕ್ಕರೆ ಬೆರೆಸಿ ಕುಡಿಯೋದು ವಾಸಿ.
ಕೆಲವರು, ತಮಗೆ ಚಹಾ ಇಷ್ಟವೇ ಇಲ್ಲವೆಂದೂ, ಅಥರ ಶಮನಕಾರಿ ಗುಣಗಳಿಗಾಗಿ ಕುಡಿಯುತ್ತೇವೆಂದು ಹೇಳಬಹುದು. ಅಂಥವರು ಸಕ್ಕರೆ ಬೆರೆಸಿಕೊಂಡೇ ಕುಡಿಯಲಿ. ಆದರೆ, ದಾರಿ ತಪ್ಪಿದ ಚಹಾಪ್ರಿಯರಿಗೊಂದು ಕಿವಿಮಾತು; ಒಮ್ಮೆ ಸಕ್ಕರೆ ಹಾಕದೆ ಚಹಾ ಕುಡಿದು ನೋಡಿ. ಮುಂದೆಂದೂ ಚಹಾವನ್ನು ಸಕ್ಕರೆ ಬೆರೆಸಿ ನೀವು ಕೆಡಿಸುವುದಕ್ಕೆ ಹೋಗಲಾರಿರಿ.
ಇಷ್ಟು ಅಂಶಗಳು ಮುಖ್ಯ. ಉಳಿದಂತೆ ಅತಿಥಿಗಳಿಗೆ ಎಂಥ ಪರಿಸರದಲ್ಲಿ ಚಹಾ ಕೊಡುತ್ತೀರಿ, ನೀವು ಎಂಥಾ ಪರಿಸರದಲ್ಲಿ ಚಹಾ ಕುಡಿಯುತ್ತೀರಿ ಅನ್ನುವುದೂ ಮುಖ್ಯ.
ಸಾಸರ್‍ನಲ್ಲಿ ಚಹಾ ಕುಡಿಯುವುದು ಅಶ್ಲೀಲ ಎಂದು ಭಾವಿಸುವುದರಿಂದ ಹಿಡಿದು. ಚಹಾಸೊಪ್ಪಿನ ವರ್ತನೆಯಿಂದಲೇ ಅತಿಥಿಗಳ ಆಗಮನ ಕಂಡುಹಿಡಿಯುವ ನಿಗೂಢ ನಂಬಿಕೆಗಳೂ ನಮ್ಮಲ್ಲಿವೆ. ಅದೆಲ್ಲ ನಮಗೆ ಬೇಕಾಗಿಲ್ಲ. ಆದರೆ ಒಂದಂತೂ ನಿಜ. ನೀವು ಚಹಾ ಪ್ರಿಯರೇ ಆಗಿದ್ದರೆ, ಸಾಲಿ ಮಾಡಿಯಾದರೂ ಮನೆಯಲ್ಲಿರುವ ಸ್ಪೀಲು ಲೋಟಗಳನ್ನು ಅಟ್ಟಕ್ಕೆ ಅಟ್ಟಕ್ಕೆ ಹಾಕಿ, ಒಂದು ಒಳ್ಳೆಯ ಚೈನಾವೇರ್ ಟೀಕಪ್ಪುಗಳನ್ನು ತಂದಿಟ್ಟುಕೊಳ್ಳಿ.
ಎಲ್ಲವೂ ಹೇಗೆ ಬದಲಾಗುತ್ತದೆ, ನೋಡಿ!.....