ಕಾಸರಗೋಡು: ಹೊಸಬಟ್ಟೆ ತೊಟ್ಟು, ಸಿಹಿ ವಿತರಣೆ, ಆಟಿಕೆಗಳ ಮೂಲಕ ಶಾಲಾ ಪ್ರವೇಶಕ್ಕೆ ಆಸ್ಪದ ಈ ಬಾರಿಯಿಲ್ಲದೇ ಹೋದರೂ, ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಸಂಭ್ರಮದೊಂದಿಗೇ ಶಾಲಾ ಪ್ರವೇಶೋತ್ಸವ ನಡೆದು ಕಲಿಕೆಯ ಫಸ್ಟ್ ಬೆಲ್ ಮೊಳಗಿದೆ.
ಕೋವಿಡ್ 19 ಎಂಬ ಮಹಾಮಾರಿ ಸಾರ್ವಜನಿಕವಾಗಿ ಶಾಲಾ ಆರಂಭದ ಸಂಭ್ರಮವನ್ನು ಕಸಿದಿದ್ದರೂ, ಆ ಸಂಭ್ರಮವನ್ನು ಗರಿಷ್ಠ ಮಟ್ಟದಲ್ಲಿ ಉಳಿಸಿಕೊಳ್ಳುವ ಯತ್ನದ ಫಲವಾಗಿ ಆನ್ ಲೈನ್ ಮೂಲಕ ಶಾಲಾ ಪ್ರವೇಶೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಪರಿಣಾಮ ನೀಡಿದೆ.
ಒಂದನೇ ತರಗತಿಗೆ ಸೇರ್ಪಡೆಗೊಂಡಿರುವ ಪುಟಾಣಿಗಳು ಈ ಸಂಭ್ರಮದ ನೆನಪಿನಲ್ಲಿ ತಮ್ಮ ಹಿತ್ತಿಲಲ್ಲಿ ಮರವಾಗಿ ಬೆಳಯಬಲ್ಲ ಸಸಿಯೊಂದನ್ನು ನೆಟ್ಟು ಇದಕ್ಕೆ "ನೆನಪಿನ ಮರ" ಎಂಬ ಹೆಸರು ನೀಡಿದ್ದಾರೆ ಎಂಬುದು ಈ ವರ್ಷದ ಹೊಸತನವಾಗಿದೆ.
ಕೇರಳ ರಾಜ್ಯ ಮಟ್ಟದ ಶಾಲಾ ಪ್ರವೇಶೋತ್ಸವ ಸಮಾರಂಭ ಕೈಟ್ ವಿಕ್ಟರ್ಸ್ ಚಾನೆಲ್ ನೇರಪ್ರಸಾರಗೊಂಡಿದೆ. ಜಿಲ್ಲಾ ಮಟ್ಟದ/ ಶಾಲಾ ಮಟ್ಟದ ಶಾಲಾ ಪ್ರವೇಶೋತ್ಸವ ಸಮಾರಂಭಗಳು ಜರುಗಿದುವು. ಗೂಗಲ್ ಮೀಟ್, ಝೂಂ, ವಾಟ್ಸ್ ಆಪ್ ಗುಂಉ ಸೌಲಭ್ಯಗಳ ಮೂಲಕ ತರಗತಿ ಮಟ್ಟದ ಪ್ರವೇಶೋತ್ಸವಗಳು ನಡೆದುವು.
ನೆಲ್ಲಿಕುಂಜೆ ಅನ್ವರುಲ್ ಉಲುಂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರವೇಶೋತ್ಸವವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪ್ರವೇಶೋತ್ಸವವನ್ನು ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.
ಕಾಞಂಗಾಡು ಶೈಕ್ಷಣಿಕ ಜಿಲ್ಲೆ ಮಟ್ಟದ ಶಾಲಾ ಪ್ರವೇಶೋತ್ಸವ ಕಾಞಂಗಾಡು ಸೌತ್ ವೊಕೇಶನಲ್ ಹೈಯರ್ ಸೆಕೆಂಡರಿ ಸಾಲೆಯಲ್ಲಿ ಜರುಗಿತು. ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಅನೇಕ ಗಣ್ಯರು ಉಪಸ್ಥಿತರಿದ್ದರು.
ಚೆರುವತ್ತೂರು ಸರಕಾರಿ ಮೀನುಗಾರಿಕೆ ಶಾಲೆಯಲ್ಲಿ ನಡೆದ ಪ್ರವೇಶೋತ್ಸವವನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಅನೇಕ ಗಣ್ಯರು ಉಪಸ್ಥಿತರಿದ್ದರು.