ನವದೆಹಲಿ: ''ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಮ 1994ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆ, 1995ರ ನಿಬಂಧನೆಗಳಿಗೆ ಅನುಗುಣವಾಗಿ ಟೆಲಿವಿಷನ್ ವಾಹಿನಿಗಳು ಪ್ರಸಾರ ಮಾಡುವ ವಸ್ತುವಿಷಯಕ್ಕೆ ಸಂಬಂಧಿಸಿದ ನಾಗರಿಕರ ಕುಂದುಕೊರತೆ/ದೂರುಗಳ ಪರಿಹಾರಕ್ಕಾಗಿ ಶಾಸನಬದ್ಧ ಕಾರ್ಯವಿಧಾನವನ್ನು ಒದಗಿಸುತ್ತದೆ,'' ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.
ಹಾಲಿ ನಿಯಮಗಳ ಅಡಿಯಲ್ಲಿ ಕಾರ್ಯಕ್ರಮ/ಜಾಹೀರಾತು ಸಂಹಿತೆಗಳ ಉಲ್ಲಂಘನೆಗೆ ಸಂಬಂಧಿಸಿದ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು ಅಂತರ-ಸಚಿವಾಲಯ ಸಮಿತಿಯ ಮೂಲಕ ಸಾಂಸ್ಥಿಕ ಕಾರ್ಯವಿಧಾನವಿದೆ. ಅಂತೆಯೇ, ವಿವಿಧ ಪ್ರಸಾರಕರು ಕುಂದುಕೊರತೆಗಳನ್ನು ಪರಿಹರಿಸಲು ತಮ್ಮದೇ ಆಂತರಿಕ ಸ್ವಯಂ-ನಿಯಂತ್ರಕ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಆದಾಗ್ಯೂ, ಕುಂದುಕೊರತೆ ಪರಿಹಾರ ಸ್ವರೂಪವನ್ನು ಬಲಪಡಿಸಲು ಶಾಸನಬದ್ಧ ಕಾರ್ಯವಿಧಾನವನ್ನು ರೂಪಿಸುವ ಅವಶ್ಯಕತೆಯಿದೆ.
ಕೆಲವು ಪ್ರಸಾರಕರು ತಮ್ಮ ಸಂಘಗಳು/ಸಂಸ್ಥೆಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವಂತೆ ಕೋರಿದ್ದರು. ಗೌರವಾನ್ವಿತ ಸುಪ್ರೀಂ ಕೋರ್ಟ್ 2000ರ ಡಬ್ಲ್ಯುಪಿ (ಸಿ) ನಂ .387ರಲ್ಲಿ "ಕಾಮನ್ ಕಾಸ್ ಮತ್ತು ಭಾರತ ಒಕ್ಕೂಟ ಮತ್ತು ಇತರರು" ಪ್ರಕರಣದಲ್ಲಿ ನೀಡಿದ ತನ್ನ ಆದೇಶದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಕುಂದುಕೊರತೆ ಪರಿಹಾರದ ಪ್ರಸ್ತುತ ಕಾರ್ಯವಿಧಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ದೂರು ಪರಿಹಾರ ಕಾರ್ಯವಿಧಾನವನ್ನು ಔಪಚಾರಿಕಗೊಳಿಸಲು ಸೂಕ್ತ ನಿಯಮಗಳನ್ನು ರೂಪಿಸಲು ಸಲಹೆ ನೀಡಿತ್ತು.
ಮೇಲೆ ಉಲ್ಲೇಖಿಸಲಾದ ಹಿನ್ನೆಲೆಯಲ್ಲಿ, ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳನ್ನು ಈ ಶಾಸನಾತ್ಮಕ ವ್ಯವಸ್ಥೆ ಒದಗಿಸಲು ತಿದ್ದುಪಡಿ ಮಾಡಲಾಗಿದೆ, ಇದು ಪಾರದರ್ಶಕವಾಗಿದ್ದು, ನಾಗರಿಕರಿಗೆ ಉಪಯುಕ್ತವಾಗಿದೆ. ಅದೇ ವೇಳೆ, ಪ್ರಸಾರಕರ ಸ್ವಯಂ ನಿಯಂತ್ರಣ ಕಾಯಗಳನ್ನು ಕೇಂದ್ರ ಸರ್ಕಾರದಲ್ಲಿ ನೋಂದಾಯಿಸಲಾಗುವುದು.
ಪ್ರಸ್ತುತ 900 ಟೆಲಿವಿಷನ್ ವಾಹಿನಿಗಳಿದ್ದು, ಇವುಗಳಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅನುಮತಿ ನೀಡಿದೆ, ಆ ಎಲ್ಲಕ್ಕೂ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಅಡಿಯಲ್ಲಿ ರೂಪಿಸಲಾಗಿರುವ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಯನ್ನು ಪಾಲಿಸುವಂತೆ ಕೋರಲಾಗಿದೆ. ಇದು ಕುಂದುಕೊರತೆ ಪರಿಹರಿಸಲು ಬಲಿಷ್ಠ ಸಾಂಸ್ಥಿಕ ವ್ಯವಸ್ಥೆಗೆ ದಾರಿ ಮಾಡಿಕೊಡುವುದಲ್ಲದೆ, ಪ್ರಸಾರಕರು ಮತ್ತು ಸ್ವಯಂ ನಿಯಂತ್ರಣ ಕಾಯಗಳ ಮೇಲೆ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನೂ ವಿಧಿಸುವ ಕಾರಣ ಮೇಲಿನ ಅಧಿಸೂಚನೆ ಮಹತ್ವದ್ದಾಗಿದೆ.(ಮಾಹಿತಿ ಕೃಪೆ: ವಾರ್ತಾ ಮತ್ತು ಪ್ರಸಾರ ಸಚಿವಾಲಯ)