ನವದೆಹಲಿ: ಕೊರೊನಾ ಎರಡನೇ ಅಲೆ ನಡುವೆ ಕೇಂದ್ರ ಸರ್ಕಾರ ಕೆಲವು ಶೈಕ್ಷಣಿಕ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂಬ ತಜ್ಞರ ಅಭಿಪ್ರಾಯದ ನಡುವೆ ಮಕ್ಕಳಿಗೆ ಸದ್ಯ ಆನ್‌ಲೈನ್‌ನಲ್ಲೇ ತರಗತಿಗಳು ನಡೆಯುತ್ತಿವೆ.
ಗುರುವಾರ ಏಮ್ಸ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಸಮೀಕ್ಷೆ ಬಿಡುಗಡೆಗೊಳಿಸಿದ್ದು, ಅದರಲ್ಲಿ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿದೆ. 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಇರುವ ಕಾರಣ ಅಷ್ಟು ಸುಲಭವಾಗಿ ಸೋಂಕಿಗೆ ತುತ್ತಾಗುವುದಿಲ್ಲ ಎಂದು ಹೇಳಿದೆ.
ಈ ನಡುವೆ, ದೇಶದಲ್ಲಿ ಶಾಲೆಗಳನ್ನು ಯಾವಾಗ ಪುನರಾರಂಭಿಸಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಉತ್ತರಿಸಿದ್ದಾರೆ. "ದೇಶದ ಬಹುಪಾಲು ಶಿಕ್ಷಕರು ಕೊರೊನಾ ಲಸಿಕೆ ಪಡೆದುಕೊಂಡ ನಂತರ ಹಾಗೂ ಮಕ್ಕಳಲ್ಲಿ ಕೊರೊನಾ ಸೋಂಕಿನ ಪರಿಣಾಮದ ಕುರಿತು ಸೂಕ್ತ ವೈಜ್ಞಾನಿಕ ಮಾಹಿತಿ ದೊರೆತ ನಂತರವಷ್ಟೇ ಶಾಲೆಗಳ ಪುನರಾರಂಭದ ಕುರಿತು ಆಲೋಚಿಸಲಾಗುವುದು," ಎಂದು ತಿಳಿಸಿದ್ದಾರೆ.
"ಆ ಸಮಯ ಶೀಘ್ರವೇ ಬರುವುದು. ಆದರೆ ವಿದೇಶಗಳಲ್ಲಿ ಶಾಲೆಗಳನ್ನು ತೆರೆದು ಮತ್ತೆ ಮುಚ್ಚಿದ ಪ್ರಸಂಗಗಳು ನಡೆದಿವೆ. ಮಕ್ಕಳನ್ನು ಹಾಗೂ ಶಿಕ್ಷಕರನ್ನು ಅಂಥ ಪರಿಸ್ಥಿತಿಗೆ ದೂಡಲು ನಮಗೆ ಇಷ್ಟವಿಲ್ಲ" ಎಂದಿದ್ದಾರೆ.
"ಕೊರೊನಾ ನಮ್ಮನ್ನು ಕಾಡಲು ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸ ನಮಗೆ ಬಂದ ನಂತರವಷ್ಟೇ ಈ ಕುರಿತು ಮುಂದಡಿ ಇಡಲು ಸಾಧ್ಯ. ಈ ಬಗ್ಗೆ ಶೀಘ್ರವೇ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ," ಎಂದು ಪೌಲ್ ಸ್ಪಷ್ಟಪಡಿಸಿದ್ದಾರೆ.