ಅಯೋಧ್ಯೆ: ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಿಸಲಿರುವಮಸೀದಿ ಮತ್ತು ಆಸ್ಪತ್ರೆ ಸಂಕೀರ್ಣಕ್ಕೆ 164 ವರ್ಷಗಳ ಹಿಂದೆ ನಿಧನರಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಅವರ ಹೆಸರನ್ನು ಇಡಲಾಗುವುದೆಂದು ಮೂಲಗಳು ಹೇಳಿದೆ.
ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಮಸೀದಿ, ಆಸ್ಪತ್ರೆ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಮತ್ತು ಸಮುದಾಯ ಅಡುಗೆ ಮನೆಯನ್ನೊಳಗೊಂಡ ಸಂಪೂರ್ಣ ಯೋಜನೆಯನ್ನು ನಿರ್ಮಿಸಲು ಯೋಜಿಸಿದೆ. ಮೌಲ್ವಿ ಅಹ್ಮದುಲ್ಲಾ ಷಾ ಅವರನ್ನು 'ಲೈಟ್ ಹೌಸ್ ಆಫ್ ಇಂಡಿಪೆಂಡೆನ್ಸ್' ಎಂದೂ ಕರೆಯುತ್ತಾರೆ. ಇವರು 1857 ರ ದಂಗೆಯ ಸಮಯದಲ್ಲಿ ಅವಧ್ ಅನ್ನು ಬ್ರಿಟಿಷ್ ಪ್ರಾಬಲ್ಯದಿಂದ ಮುಕ್ತವಾಗಿಸಿದ್ದರು.
ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ "ಅವರ ಹುತಾತ್ಮ ದಿನದಂದು, ಇಡೀ ಯೋಜನೆಯನ್ನು ಅವರ ಹೆಸರಿಂದ ಗುರುತಿಸಲು ನಾವು ನಿರ್ಧರಿಸಿದ್ದೇವೆ. ಜನವರಿಯಲ್ಲಿ, ನಾವು ಸಂಶೋಧನಾ ಕೇಂದ್ರವನ್ನು ಹಿಂದೂ-ಮುಸ್ಲಿಂ ಸಹೋದರತ್ವದ ಪ್ರತೀಕವಾಗಿದ್ದ ಮೌಲ್ವಿ ಫೈಜಾಬಾದಿಗೆ ಅರ್ಪಿಸಿದ್ದೇವೆ. 160 ವರ್ಷದ ಹಿಂದೆ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ,ಅಹ್ಮದುಲ್ಲಾ ಷಾ ಫೈಜಾಬಾದಿ ಭಾರತೀಯ ಇತಿಹಾಸದಲ್ಲಿ ಇನ್ನೂ ಸರಿಯಾಗಿ ಗುರುತಿಸಲ್ಪಟ್ಟಿಲ್ಲ. ಫೈಜಾಬಾದ್‌ನ ಮಸೀದಿ ಸರಾಯ್ ಅವರ ಹೆಸರಿನಲ್ಲಿರುವ ಏಕೈಕ ಕಟ್ಟಡವಾಗಿದೆ." ಎಂದರು.
ಬ್ರಿಟಿಷ್ ಏಜೆಂಟರಿಂದ ಕೊಲ್ಲಲ್ಪಟ್ಟ ಮತ್ತು ಶಿರಚ್ಚೇಧ ಮಾಡಿದ ನಂತರ ಜನರು ಅವರ ಸಾವಿನ ಸ್ಥಳವನ್ನು ಮಾಧಿಯನ್ನಾಗಿ ಪರಿವರ್ತಿಸುವುದನ್ನು ತಡೆಯಲು ಬ್ರಿಟೀಷರು ಅವರ ದೇಹ ಮತ್ತು ತಲೆಯನ್ನು ಎರಡು ವಿಭಿನ್ನ ಸ್ಥಳಗಳಲ್ಲಿ ಹೂಳಿದರು ಎಂದು ಹುಸೈನ್ ಹೇಳಿದರು.
ಮಸೀದಿ ಟ್ರಸ್ಟಿ ಕ್ಯಾಪ್ಟನ್ ಅಫ್ಜಾಲ್ ಅಹ್ಮದ್ ಖಾನ್ "ಮೌಲ್ವಿ ಅವರ ಜೀವಿತಾವಧಿಯಲ್ಲಿ ಮಾತ್ರವಲ್ಲದೆ ಸಾವಿನಾಚೆಗೂ ಅಪಾಯಕಾರಿ ಎಂದು ಬ್ರಿಟಿಷರು ಭಯಪಟ್ಟರು. ಬ್ರಿಟಿಷ್ ಅಧಿಕಾರಿಗಳಾದ ಜಾರ್ಜ್ ಬ್ರೂಸ್ ಮಲ್ಲೆಸನ್ ಮತ್ತು ಥಾಮಸ್ ಸೀಟನ್ ಅವರ ಧೈರ್ಯ, ಶೌರ್ಯ ಮತ್ತು ಸಾಂಸ್ಥಿಕತೆಯನ್ನು ಉಲ್ಲೇಖಿಸಿದ್ದರೂ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಇತಿಹಾಸ ಮೌಲ್ವಿ ಅಹ್ಮದುಲ್ಲಾ ಷಾ ಅವರ ಸಾಧನೆ ಗುರುತಿಸಿಲ್ಲ ಎನ್ನುವುದು ದುರದೃಷ್ಟಕರ." ಎಂದರು.
2019 ರ ನವೆಂಬರ್‌ನ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಮುಸ್ಲಿಮರಿಗೆ ನೀಡಲಾದ ಐದು ಎಕರೆ ಭೂಮಿಯಲ್ಲಿ ಅಯೋಧ್ಯ ಮಸೀದಿ ಮತ್ತು ಆಸ್ಪತ್ರೆ ಯೋಜನೆಯನ್ನು ನಿರ್ಮಿಸಲಾಗುವುದು ಮೊಘಲ್ ಚಕ್ರವರ್ತಿ ಬಾಬರ್ ಹೆಸರನ್ನು ಮಸೀದಿಗೆ ಇಡದಿರಲು ಸುನ್ನಿ ವಕ್ಫ್ ಮಂಡಳಿ ರಚಿಸಿದ ಐಐಸಿಎಫ್ ಟ್ರಸ್ಟ್ ನಿರ್ಧಾರ ತೆಗೆದುಕೊಂಡಿತ್ತು.