ತಿರುವನಂತಪುರ: ಕೆಪಿಸಿಸಿಯ ಶಸ್ತ್ರಕ್ರಿಯೆಯ ಭಾಗವಾಗಿ ಇನ್ನು ಬೃಹತ್ ಸಮಿತಿಗಳು ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ. ಕೆಪಿಸಿಸಿ ಈಗ 51 ಸದಸ್ಯರ ಸಮಿತಿಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿಯ ನಿನ್ನೆ ನಡೆದ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು.
ಕೆಪಿಸಿಸಿ ಅಧ್ಯಕ್ಷರು, ಮೂವರು ಕಾರ್ಯಕಾರಿ ಅಧ್ಯಕ್ಷರು, ಮೂವರು ಉಪಾಧ್ಯಕ್ಷರು, 15 ಪ್ರಧಾನ ಕಾರ್ಯದರ್ಶಿಗಳು ಮತ್ತು ಖಜಾಂಚಿ ಇರುತ್ತಾರೆ. ಇದರ ಕೆಳಗೆ ಕಾರ್ಯದರ್ಶಿಗಳು ಇರುತ್ತಾರೆ. ಕಾರ್ಯಕಾರಿ ಸಭೆಯಲ್ಲಿ ಅವರನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು. ಕೆಪಿಸಿಸಿಯಲ್ಲಿ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗದವರಿಗೂ ಮೀಸಲಾತಿ ಕಲ್ಪಿಸಲಾಗುವುದು ಎಂದು ಸುಧಾಕರನ್ ಸ್ಪಷ್ಟಪಡಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿ ಹತ್ತು ಶೇಕಡಾ ಮೀಸಲಾತಿ ಖಾತ್ರಿಪಡಿಸಲಾಗುವುದು. ಎಸ್ ಸಿ ಮತ್ತು ಎಸ್ ಟಿ ಕ್ಷೇತ್ರಗಳಲ್ಲೂ ಶೇ ಹತ್ತು ರಷ್ಟು ಮೀಸಲಾತಿ ನೀಡಲಾಗುವುದು.ಪರಾಭವದ ವೈಫಲ್ಯದ ಕಾರಣವನ್ನು ಕಂಡುಹಿಡಿಯಲು ಮೂವರು ಸದಸ್ಯರ ಐದು ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಪಕ್ಷದೊಳಗಿನ ಅನೈತಿಕತೆಯನ್ನು ಹೋಗಲಾಡಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಶಿಸ್ತು ಸಮಿತಿಗಳನ್ನು ರಚಿಸಲಾಗುವುದು. ಚಾನೆಲ್ ಚರ್ಚೆಯಲ್ಲಿ ಯಾರು ಭಾಗವಹಿಸಬೇಕೆಂದು ಕೆಪಿಸಿಸಿ ನಿರ್ಧರಿಸುತ್ತದೆ. ಚುನಾವಣೆಯಲ್ಲಿ ಗಂಭೀರ ಆರೋಪಗಳಿಗೆ ಗುರಿಯಾದ ನಾಯಕರ ವಿರುದ್ಧ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
ಪಕ್ಷವನ್ನು ತಳಮಟ್ಟದಿಂದ ಮತ್ತೆ ಸಂಘಟಿಸಲಾಗುತ್ತದೆ. ಜಿಲ್ಲಾ ಸಮಿತಿ, ವಿಧಾನಸಭಾ ಕ್ಷೇತ್ರ ಸಮಿತಿ, ಬ್ಲಾಕ್ ಸಮಿತಿ, ಮಂಡಲ ಸಮಿತಿ, ವಾರ್ಡ್, ಬೂತ್ ಮತ್ತು ಸೂಕ್ಷ್ಮ ಮಟ್ಟದ ಸಮಿತಿ (ನೆರೆಹೊರೆಯ ಗುಂಪು) ನ್ನು ಮರುಸಂಘಟಿಸಲಾಗುವುದು. ರಾಜಕೀಯ ಅಧ್ಯಯನಕ್ಕಾಗಿ ರಾಜಕೀಯ ಶಾಲೆ ಪ್ರಾರಂಭಿಸಲಾಗುವುದು ಎಂದು ಸುಧಾಕರನ್ ಹೇಳಿದರು.