ನವದೆಹಲಿ: ಕ್ರಿಮಿನಲ್ ಮೊಕದ್ದಮೆಯೊಂದರಲ್ಲಿ ಮಧ್ಯಂತರ ಜಾಮೀನು ವಿಸ್ತರಣೆಗಾಗಿ ತಿರುಚಿದ ಕೋವಿಡ್ 19 ಪಾಸಿಟಿವ್ ವರದಿ ಸಲ್ಲಿಸಿದ್ದ ಆರೋಪಿಯ ವಿರುದ್ಧ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಆರೋಪಿಯ ಸಂಬಂಧಿಕರು, ವಕೀಲರು, ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರು, 'ನ್ಯಾಯಾಲಯಕ್ಕೆ ಬರುವ ಎಲ್ಲ ಕಕ್ಷಿದಾರರು 'ಪರಿಶುದ್ಧ'ವಾಗಿರಬೇಕು. ನ್ಯಾಯಾಲಯವು ಈ ಸಾಂಕ್ರಾಮಿಕದ ಕಾಲದಲ್ಲಿ ವಿಶೇಷವಾಗಿ ಕೋವಿಡ್ ಸೋಂಕಿಗೆ ಒಳಗಾದವರ ಬಗ್ಗೆ ಅನುಭೂತಿ ಮತ್ತು ಸಹಾಯನಭೂತಿಯನ್ನು ಹೊಂದಿರುತ್ತದೆ' ಎಂದು ಹೇಳಿದರು.
ಆದರೆ, ಈ ಸಹಾನುಭೂತಿಯನ್ನು ದುರುಪಯೋಗಪಡಿಸಿಕೊಂಡು, ನಕಲಿ ವರದಿಗಳನ್ನು ಸಲ್ಲಿಸುವುದನ್ನು ನ್ಯಾಯಾಲಯ ಕ್ಷಮಿಸುವುದಿಲ್ಲ ಎಂದು ನ್ಯಾಯಮೂರ್ತಿಯವರು ಹೇಳಿದರು.