ನವದೆಹಲಿ: ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಪಕ್ಷದ ಮುಖಂಡರು ಹಾಗೂ ಕೆಲವು ಕೇಂದ್ರ ಸಚಿವರೊಂದಿಗೆ ನಡೆದ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಿದ್ಧತೆ, ದೇಶದ ರಾಜಕೀಯ ವಿದ್ಯಮಾನಗಳು ಹಾಗೂ ಆಡಳಿತದ ಕುರಿತು ಚರ್ಚೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ಸ್ಮೃತಿ ಇರಾನಿ, ಮತ್ತು ಕಿರಣ್ ರಿಜಿಜು ಅವರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
'ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಿದ್ಧತೆಯ ವಿಚಾರವೇ ಈ ಸಭೆಯ ಮುಖ್ಯ ಕಾರ್ಯಸೂಚಿ' ಎಂದು ಪಕ್ಷದ ಮುಖಂಡರು ಸಭೆಯ ನಂತರ ಹೇಳಿದರು.
ಪಂಜಾಬ್ ಹೊರತುಪಡಿಸಿ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ನಡೆಯುವ ಚುನಾವಣೆಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡುವ ಉದ್ದೇಶದೊಂದಿಗೆ ಹಿರಿಯ ನಾಯಕರು ಸರಣಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.