ನವದೆಹಲಿ: ಯೋಗ ಗುರು ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಔಷಧ ಕೊರೊನಿಲ್ ಅನ್ನು ಕೋವಿಡ್ ಕಿಟ್‌ನಲ್ಲಿ ಸೇರಿಸುವ ಸಂಬಂಧ ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ ವ್ಯಕ್ತಪಡಿಸಿ ಉತ್ತರಾಖಂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಬಾಬಾ ರಾಮದೇವ್ ಅವರ ಪತಂಜಲಿಯ ಕೊರೊನಿಲ್ ಔಷಧಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿಲ್ಲ. ಕೇಂದ್ರದ ಕೊರೊನಾ ಮಾರ್ಗಸೂಚಿಯನ್ನೂ ಒಳಗೊಂಡಿಲ್ಲ ಎಂದು ಆರೋಪಿಸಿ ಪ್ರಸ್ತಾವ ತಿರಸ್ಕರಿಸಿದೆ.
ಐಎಂಎ ಕಾರ್ಯದರ್ಶಿ ಡಾ. ಅಜಯ್ ಖನ್ನಾ ಅವರು ಪತ್ರ ಬರೆದಿದ್ದು, ಕೊರೊನಿಲ್ ಮಾತ್ರೆ ಔಷಧವಲ್ಲ. ಕೇಂದ್ರ ಸರ್ಕಾರ ಇದನ್ನು ಆಹಾರಕ್ಕೆ ಪೂರಕ ಎಂದು ಹೇಳಿದೆ ಎಂದು ಉತ್ತರಾಖಂಡ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಕೋವಿಡ್ ಕಿಟ್‌ನಲ್ಲಿ ಈ ಔಷಧಿ ಸೇರಿಸುವುದು ಮಿಕ್ಸೋಪತಿಯಾಗುತ್ತದೆ ಎಂದು ಟೀಕಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಈ ಔಷಧಿಯನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಔಷಧಿ ಎಂದು ಕೊರೊನಿಲ್ ಅನ್ನು ಪತಂಜಲಿ ಬಿಡುಗಡೆ ಮಾಡಿತ್ತು. ಇದನ್ನು ಕೊರೊನಾ ಕಿಟ್‌ನೊಳಗೆ ಸೇರಿಸುವಂತೆ ಪತಂಜಲಿ ಉತ್ತರಾಖಂಡ ಸರ್ಕಾರಕ್ಕೆ ಈಚೆಗೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಐಎಂಎ ತಿರಸ್ಕರಿಸಿದೆ.
ಯೋಗಗುರು ಬಾಬಾ ರಾಮ್‌ದೇವ್‌ಗೆ ಈಚೆಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಬಾಬಾ ರಾಮ್‌ದೇವ್ ಅವರ ಸಂಸ್ಥೆಯಾದ ಪತಂಜಲಿ ಅದರ ಕೊರೊನಿಲ್ ಕಿಟ್ ವಿಚಾರವಾಗಿ ಜನರಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದೆ. ಈ ಕೊರೊನಿಲ್ ಕಿಟ್‌ನಿಂದ ಕೊರೊನಾ ವೈರಸ್‌ನಿಂದ ಗುಣಮುಖರಾಗಬಹುದು ಎಂದು ಹೇಳಿಕೊಳ್ಳುತ್ತಿದೆ ಎಂದು ಡಿಎಂಎ ದಾವೆ ಹೂಡಿತ್ತು.