ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಯಬಾರದು. ದಯವಿಟ್ಟು ಪ್ರತೀಯೊಬ್ಬರೂ ಲಸಿಕೆ ಪಡೆದುಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಮಾತನಾಡಿರುವ ಅವರು, ದೇಶದ ಲಸಿಕಾ ಅಭಿಯಾನವನ್ನು ಕೊಂಡಾಡಿದ್ದಾರೆ.
ನಾವು ದೇಶವಾಸಿಗಳು ಕೊರೋನಾ ವಿರುದ್ಧ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನಾವು ಒಟ್ಟಾಗಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಕೆಲವೇ ದಿನಗಳ ಹಿಂದೆ ನಮ್ಮ ದೇಶವು ಅಭೂತಪೂರ್ವ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.
ಲಸಿಕೆ ವಿಚಾರದಲ್ಲಿ ದಯವಿಟ್ಟು ಭಯವನ್ನು ತೊಡೆದುಹಾಕಿ. ಲಸಿಕೆ ಹಾಕಿಸಿದ ಬಳಿಕ ಕೆಲವೊಮ್ಮೆ ಜನರಿಗೆ ಜ್ವರ ಬರಬಹುದು. ಆದರೆ, ಅದು ತುಂಬಾ ಸೌಮ್ಯವಾಗಿರುತ್ತದೆ.ಕೆಲವೇ ಗಂಟೆಗಳವರೆಗೆ ಇರುತ್ತದೆ. ಲಸಿಕೆಯನ್ನು ತಪ್ಪಿಸುವುದು ತುಂಬಾ ಅಪಾಯಕಾರಿ. ನೀವು ನಿಮ್ಮನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲದೆ. ನಿಮ್ಮ ಕುಟುಂಬ ಮತ್ತು ಇಡೀ ಹಳ್ಳಿಯನ್ನೂ ಕೂಡ ಅಪಾಯಕ್ಕೆ ದೂಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವೈದ್ಯರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ
ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ವೈದ್ಯರ ಅವಿರತ ಸೇವೆಗೆ ಇಡೀ ರಾಷ್ಟ್ರ ಕೃತಜ್ಞರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಆಚರಣೆಯನ್ನು ಮಹಾ ವೈದ್ಯ ಡಾ ಬಿ ಸಿ ರಾಯ್ ಅವರಿಗೆ ಸಮರ್ಪಿಸಲಾಗುವುದು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಸೇವೆಗಾಗಿ ಶ್ರಮಿಸುತ್ತಿರುವ ವೈದ್ಯರ ಕೊಡುಗೆಗೆ ನಾವೆಲ್ಲ ಕೃತಜ್ಞರಾಗಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ 'ವೈದ್ಯರ ದಿನ' ಹೆಚ್ಚು ಮಹತ್ವವೆನಿಸಿದೆ ಎಂದು ಅವರು ಹೇಳಿದ್ದಾರೆ.
'ಕೋವಿಡ್ ಸಾಂಕ್ರಾಮಿಕದ ವೇಳೆ ಅವಿರತ ಶ್ರಮಿಸುತ್ತಿರುವ ವೈದ್ಯರಿಗೆ ಸಹಾಯ ಮಾಡಲು ಅಪಾರ ಜನರು ಮುಂದೆ ಬರುತ್ತಿದ್ದಾರೆ. ಶ್ರೀನಗರದಲ್ಲಿ ದಲ್ ಸರೋವರದಲ್ಲಿ ಆಂಬ್ಯಲೆನ್ಸ್ ದೋಣಿ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯನ್ನು ಕೋವಿಡ್ ಸೋಂಕು ವಿರುದ್ಧ ಹೋರಾಡಿದ ದೋಣಿ ಮಾಲೀಕರೇ ಆರಂಭಿಸಿದ್ದಾರೆಂದು ತಿಳಿಸಿದ್ದಾರೆ.