ಬದಿಯಡ್ಕ: ಕೇರಳದಲ್ಲೇ ಅತೀ ದೊಡ್ಡ ಕೊರಗ ಕಾಲನಿಯಾದ ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಪೆರಡಾಲ ಕೊರಗ ಕಾಲನಿಯಲ್ಲಿ ಏಕಾಏಕಿ ಕೊರೊನಾ ಸ್ಪೋಟಗೊಂಡಿದ್ದು, 60ಕ್ಕಿಂತಲೂ ಅಧಿಕ ಮಂದಿಗಳಲ್ಲಿ ಇದೀಗ ಸೋಂಕು ಕಂಡುಬಂದು ಆತಂಕ ಮೂಡಿಸಿದೆ.
ಕಾಲನಿಯ 12 ಕುಟುಂಬಗಳ 14 ರಷ್ಟು ಮಂದಿಗೆ ಕಳೆದೊಂದು ವಾರದಲ್ಲಿ ಸೋಂಕು ಕಂಡುಬಂದು ಡೊಮಿಸಿಲಿಯರಿ ಕೇರ್ ಸೆಂಟರ್ ಗೆ ದಾಖಲಾಗಿ ಚಿಕಿತ್ಸೆಯಲ್ಲಿರುವ ಮಧ್ಯೆ, ಬುಧವಾರ ಬೆಳಿಗ್ಗೆ 40 ಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ಲಕ್ಷಣ ಕಂಡುಬಂದು ಆತಂಕ ಮೂಡಿಸಿದೆ.
ಕಾಲನಿಯಲ್ಲಿ 57 ರಷ್ಟು ಕುಟುಂಬಗಳು ವಾಸಿಸುತ್ತಿದ್ದು, ಅತಿ ದೊಡ್ಡ ಕೊರಗ ಕಾಲನಿ ಎಂಬ ಹೆಗ್ಗಳಿಕೆ ಇಲ್ಲಿಯದು. ಪಾರಂಪರಿಕ ವೃತ್ತಿಯ ಜೊತೆಗೆ ಹೊಸ ತಲೆಮಾರು ಕೂಲಿ-ನಾಲಿ ಮಾಡಿ ಬದುಕು ಸಾಗಿಸುತ್ತಿದ್ದು, ಆಧುನಿಕ ಪ್ರಪಂಚಕ್ಕೆ ಇನ್ನೂ ನಿಕಟರಾಗುವ ಹಂತದಲ್ಲಷ್ಟೇ ಈ ಕಾಲನಿ ಸಾಗುತ್ತಿದೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಕಾಲನಿ ನಿವಾಸಿಗಳ ಅರಿವಿನ ಕೊರತೆ, ಉದಾಸೀನತೆ ಹಾಗೂ ಇತರರ ಮಾತುಗಳನ್ನು ಆಲಿಸುವ ವ್ಯವಧಾನಗಳಿಲ್ಲದಿರುವ ಕಾರಣ ತೀರಾ ಹಿಂದುಳಿಯಲು ಈ ಕಾಲನಿ ಕಾರಣವಾಗಿದೆ.
ಪ್ರಸ್ತುತ ಬುಧವಾರ ಬೆಳಿಗ್ಗಿನ ವರದಿಯ ಅನುಸಾರ ಕಾಲನಿಯ ಕನಿಷ್ಠ ಇಬ್ಬರು ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. 8 ಮಂದಿಗಳನ್ನು ಡೊಮಿಸಿಲಿಯರಿ ಕೇರ್ ಸೆಂಟರಿಗೆ ದಾಖಲಿಸಲಾಗಿದ್ದು, ಮಿಕ್ಕುಳಿದ 50ಕ್ಕಿಂತಲೂ ಹೆಚ್ಚು ಮಂದಿ ಮನೆಯಲ್ಲಿ ನಿರೀಕ್ಷಣೆಯಲ್ಲಿದ್ದು, ಆರೋಗ್ಯ ಇಲಾಖೆಯ ತಂಡ ಕಾಲನಿಯತ್ತ ದೌಡಾಯಿಸಿದೆ.
ಅಭಿಮತ:
ಕಾಲನಿಯು ಸಂಪೂರ್ಣವಾಗಿ ಆರೋಗ್ಯ ಇಲಾಖೆಯ ನಿರೀಕ್ಷಣೆಯಲ್ಲಿದೆ. ಮೂಲ ಸಮುದಾಯದ ಜನರು ಇವರಾಗಿದ್ದು, ಇತರರಿಗಿಂತ ವಿಭಿನ್ನ ಜೀವನ ಶೈಲಿಯ ಕಾಲನಿ ನಿವಾಸಿಗಳಲ್ಲಿ ಸೋಂಕು ವ್ಯಾಪಕಗೊಂಡಿರುವುದು ಕಳವಳಕಾರಿಯಾಗಿದೆ. ಆದರೂ ಆರೋಗ್ಯ ಇಲಾಖೆ ಸಂಪೂರ್ಣ ಹಿಡಿತ ಸಾಧಿಸುವ ಭರವಸೆ ಹೊಂದಿದೆ.
ದೇವಿದಾಕ್ಷನ್
ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ(ಎಚ್.ಐ.)