ಕೋಲ್ಕತ್ತ: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಸ್ವಾಮಿ ಶಿವಮಯಾನಂದಜಿ ಅವರು ಕೋವಿಡ್ 19 ಸೋಂಕಿನಿಂದಾಗಿ ಶುಕ್ರವಾರ ರಾತ್ರಿ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸ್ವಾಮೀಜಿ ಅಧಿಕ ರಕ್ತದೊತ್ತಡ, ಶ್ವಾಸನಾಳದ ಆಸ್ತಮಾ ಮತ್ತು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು.
86 ವರ್ಷ ವಯಸ್ಸಿನ ಹಿರಿಯ ಸನ್ಯಾಸಿಗೆ ಮೇ 22ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆರ್‌ಕೆಎಂ ಸೇವಾ ಪ್ರತಿಷ್ಠಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಇರುವುದು ದೃಢಪಟ್ಟಿತ್ತು. ಮೇ 28ರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿತ್ತು. ಇದೇ 10ರವರೆಗೂ ಅವರು ಕೃತಕ ಉಸಿರಾಟದಲ್ಲೆ ಇದ್ದರು. ರಾತ್ರಿ 9.05ರಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.
1934ರ ಡಿಸೆಂಬರ್ 20ರಂದು ಬಿಹಾರದಲ್ಲಿ ಜನಿಸಿದ ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ರಾನೆನ್ ಮುಖರ್ಜಿ. ಇವರು ಸ್ವಾಮಿ ವಿಶುದ್ಧಾನಂದಜಿ ಮಹಾರಾಜ್ ಅವರ ಶಿಷ್ಯರಾಗಿದ್ದರು. 1959ರಲ್ಲಿ ಬೇಲೂರು ಮಠ ಸೇರಿ, 1969ರಲ್ಲಿ ಸ್ವಾಮಿ ವೀರೇಶ್ವರಾನಂದಜಿ ಮಹಾರಾಜರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು. 2016ರಿಂದ ಭಕ್ತರಿಗೆ ದೀಕ್ಷೆ ನೀಡಲು ಆರಂಭಿಸಿದ್ದ ಸ್ವಾಮೀಜಿ, ಅಧ್ಯಾತ್ಮದ ಪ್ರವಚನ ನೀಡುತ್ತಿದ್ದರು.
ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.