ಸಿತಾಪುರ: ನಾಯಿಯ ಕಾಲೊಂದನ್ನು ಮುರಿದ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ, ಪ್ರಕರಣ ದಾಖಲಿಸುವಂತೆ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಹೇಳುವ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೊಣ್ಣೆಯಿಂದ ನಾಯಿಯ ಕಾಲು ಮುರಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆಡಿಯೋ ಕ್ಲಿಪ್ ನಲ್ಲಿರುವ ಧ್ವನಿಯ ಬಗ್ಗೆ ಖಚಿತತೆ ದೃಢಪಟ್ಟಿಲ್ಲ.
ನಾಯಿಯ ಕಾಲನ್ನು ಮುರಿದ ವ್ಯಕ್ತಿಯ ಕಪಾಳಕ್ಕೆ ಹೊಡೆದು ಬಂಧಿಸುವಂತೆ ಹಾಗೂ ಚಿಕಿತ್ಸೆ ವೆಚ್ಚವನ್ನು ಆತನಿಂದಲೇ ಭರಿಸುವಂತೆ ಕೊತ್ವಾಲಿ ಸಿತಾಪುರ ಠಾಣಾಧಿಕಾರಿಗೆ ಸುಲ್ತಾನ್ ಪುರದ ಸಂಸದೆ ಮೇನಕಾ ಗಾಂಧಿ ಹೇಳುವುದು ಆಡಿಯೋದಲ್ಲಿದೆ.
ಭಾನುವಾರ ಸಂಜೆ ಕೊತ್ವಾಲಿ ಠಾಣೆಗೆ ಬಂದ ಸ್ಥಳೀಯ ವ್ಯಕ್ತಿಯೋರ್ವ, ಪೊಲೀಸ್ ಅಧಿಕಾರಿಗೆ ಫೋನ್ ಕೊಟ್ಟು, ಮೇನಕಾ ಗಾಂಧಿ ಮಾರ್ಗದಲ್ಲಿರುವುದಾಗಿ ಹೇಳಿದರು. ದೂರವಾಣಿ ಸಂಭಾಷಣೆ ವೇಳೆ, ಆರೋಪಿ ದೊಣ್ಣೆಯಿಂದ ನಾಯಿಯ ಕಾಲು ಮುರಿದಿರುವ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಠಾಣಾಧಿಕಾರಿ ಟಿಪಿ ಸಿಂಗ್ ಹೇಳಿದ್ದಾರೆ.
ಜೂನ್ 18 ರಂದು ಈ ಘಟನೆ ನಡೆದಿದೆ. ಆದರೆ, ಪ್ರಾಣಿ ಹಕ್ಕುಗಳ ಹೋರಾಟಗಾರ ಮೀರಾಜ್ ಅಹ್ಮದ್ ಜೂನ್ 20 ರಂದು ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ಆರೋಪಿಯ ಮನೆಗೆ ಹೋಗಿದ್ದಾಗ ಆತ ಮನೆಯಲ್ಲಿ ಇರಲಿಲ್ಲ. ತದನಂತರ ಸಂಜೆ, ಮೇನಕಾ ಗಾಂಧಿಯಿಂದ ಕರೆ ಬಂದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮತ್ತೋರ್ವ ವ್ಯಕ್ತಿಯ ಫೋನ್ ನಿಂದ ಸಂಭಾಷಣೆ ನಡೆಸಿರುವುದರಿಂದ ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ, ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಾಯಿ ಸುರಕ್ಷಿತವಾಗಿದ್ದು, ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.