ತಿರುವನಂತಪುರ: ಕೋವಿಡ್ ಮಾನದಂಡಗಳನ್ನು ಅನುಸರಿಸಿ ದೇವಾಲಯಗಳು, ಪೂಜಾ ಸ್ಥಳಗಳನ್ನು ತೆರೆಯಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಬಿವರೇಜ್ ಮಳಿಗೆಗಳು ಮತ್ತು ಬಾರ್‍ಗಳನ್ನು ತೆರೆಯಲು ಅನುಮತಿಸಿರುವಾಗ ಪೂಜಾ ಸ್ಥಳಗಳನ್ನು ಮಾತ್ರ ನಿಷೇಧಿಸುವುದು ಸ್ವೀಕಾರಾರ್ಹವಲ್ಲ. ಭಕ್ತರ ಭಾವನೆಗಳನ್ನು ಸರ್ಕಾರ ಗೌರವಿಸಬೇಕು ಎಂದು ಸುರೇಂದ್ರನ್ ಹೇಳಿರುವರು.
ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲಿಸಿದರೂ ಆರಾಧನಾಲಯಗಳನ್ನು ತೆರೆಯಲು ಅವಕಾಶ ನೀಡದ ಕಾರಣ ಎನ್.ಎಸ್.ಎಸ್.(ನಾಯರ್ ಸರ್ವೀಸ್ ಸೊಸೈಟಿ) ಮತ್ತು ಮುಸ್ಲಿಂ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಇನ್ನೂ ಅನುಮತಿ ನೀಡದಿರುವುದು ಭಕ್ತರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎನ್ ಎಸ್ ಎಸ್ ಹೇಳಿಕೆಯಲ್ಲಿ ತಿಳಿಸಿದೆ. ಬಾರ್ ಗಳಂತವನ್ನು ತೆರೆಯಲು ಅನುಮತಿ ನೀಡಿದ್ದರೂ ಆರಾಧನಾಲಯಗಳನ್ನು ತೆರೆಯಲು ಏಕೆ ಅನುಮತಿಸುವುದಿಲ್ಲ ಎಂದು ಎನ್.ಎಸ್.ಎಸ್ ಕೇಳಿದೆ.
ಜಮಾತೆ-ಇ-ಇಸ್ಲಾಮಿ ಎಮಿರ್ ಎಂ.ಕೆ.ಅಬ್ದುಲ್ ಅಜೀಜ್ ಅವರು ಇತರ ಪ್ರದೇಶಗಳಿಗೆ ವಿನಾಯಿತಿ ನೀಡುವಾಗ ಸರ್ಕಾರವು ಪೂಜಾ ಸ್ಥಳಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ನಿರ್ಬಂಧಗಳ ನಡುವೆಯೂ ಪೂಜಾ ಸ್ಥಳಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡದಿರುವುದು ದುರದೃಷ್ಟಕರ ಎಂದು ಕೆಎನ್‍ಎಂ ರಾಜ್ಯ ಅಧ್ಯಕ್ಷ ಅಬ್ದುಲ್ಲಕೋಡ ಮದನಿ ಹೇಳಿದ್ದಾರೆ.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಇತರರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಶುಕ್ರವಾರ ಪ್ರಾರ್ಥನೆಯಲ್ಲಿ 40 ಜನರಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಿದ್ದಾರೆ.