ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಏಕಾಕಿತನ ಎದುರಿಸುತ್ತಿರುವ ಕುಟುಂಬಗಳಿಗೆ ಸಾಂತ್ವನ ಒದಗಿಸುವ ಕುಟುಂಬಶ್ರೀಯ ಹೋಂ ಡೆಲಿವರಿ ವ್ಯವಸ್ಥೆ "ಹೋಮರ್" ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅಗತ್ಯವಿರುವ ಸಾಮಾಗ್ರಿಗಳು, ಔಷಧಗಳು ಇತ್ಯಾದಿ ಮನೆಗಳಿಗೇ ತಲಪಿಸುವ ನಿಟ್ಟಿನಲ್ಲಿ ಜಿಲ್ಲಾ ಕುಟುಂಬಶ್ರೀ ಮಿಷನ್ ನೇತೃತ್ವದಲ್ಲಿ ಆರಂಭಿಸಲಾದ ನೂತನ ಯೋಜನೆ "ಹೋಮರ್(ಕುಟುಂಬಶ್ರೀ ಡೋರ್ ಡೆಲಿವರಿ ಸೇವೆ)" ವ್ಯವಸ್ಥೆಯಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ಮಂಗಲ್ಪಾಡಿ, ಕಾಸರಗೋಡು, ಕಾಞಂಗಾಡು, ಚೆರುವತ್ತೂರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಯೋಜನೆ ಜಾರಿಗೊಳ್ಳಲಿದೆ. ಮನೆ ಬಾಗಿಲಿಗೆ ತಲಪಿಸುವ ಯೋಜನೆ ಮೂಲಕ ಕುಟುಂಬಶ್ರೀ ಸಹಿತ ಕಿರು ಉದ್ದಿಮೆಗಳ ಉತ್ಪನ್ನಗಳ ಮಾರಾಟಕ್ಕೆ ಈ ಮೂಲಕ ಅವಕಾಶ ಲಭಿಸಲಿದೆ.
ಮೊದಲ ಹಂತದಲ್ಲಿ ಎರಡು ಹೋಂ ಡೆಲಿವರಿ ಏಜೆಂಟ್ ಗಳ ತಂಡ ಚಟುವಟಿಕೆ ಆರಂಭಿಸಲಿದೆ. ಈ ಏಜೆಂಟರ ವಾಟ್ಸ್ ಆಪ್ ನಂಬ್ರ ಮೂಲಕ ಗ್ರಾಹಕರು ಅಗತ್ಯವಿರುವ ಸಾಮಾಗ್ರಿಗಳ ಬುಕ್ಕಿಂಗ್ ಮಾಡಬಹುದು. ನಂತರ ಗೂಗಲ್ ಪೇ, ಫೆÇೀನ್ ಪೇ ಇತ್ಯಾದಿ ಸೌಲಭ್ಯಗಳ ಮೂಲಕ ಯಾ ನೇರವಾಗಿ ಹಣ ಪಾವತಿಸಬಹುದು.
ಯೋಜನೆಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಚೆರುವತ್ತೂರು ಕುಟುಂಬಶ್ರೀ ಬಝಾರ್ ನಲ್ಲಿ ಜರುಗಿತು. ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಹಸುರು ನಿಶಾನೆ ತೋರಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸಂಚಾಲಕ ಡಿ.ಹರಿದಾಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಸಿ.ಡಿ.ಎಸ್.ಅಧ್ಯಕ್ಷೆ ವಿ.ವಿ.ರೀನಾ ಮೊದಲಾದವರು ಉಪಸ್ಥಿತರಿದ್ದರು.
ಕುಟುಂಬಶ್ರೀ ಸಿ.ಡಿ.ಎಸ್.ನೇತೃತ್ವದಲ್ಲಿ ಕಾಸರಗೋಡು ನಗರಸಭೆಯಲ್ಲಿ ಆರಂಭಿಸಲಾದ ಹೋಂ ಡೆಲಿವರಿ ಸೇವೆಯನ್ನು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಸಿ.ಡಿ.ಎಸ್. ಅಧ್ಯಕ್ಷೆ ಸಾಹಿರಾ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡು, ನಗರಸಭೆ ಕಾರ್ಯದರ್ಶಿ ಮನೋಹರ್, ಮೆಂಬರ್ ಸೆಕ್ರಟರಿ ಎ.ಆರ್.ಅಜೀಷ್, ಲೆಕ್ಕಾಧಿಕಾರಿ ಸಜಿತಾ ಮೊದಲಾದವರು ಉಪಸ್ಥಿತರಿದ್ದರು.
ಮಂಗಲ್ಪಾಡಿ ಗ್ರಾಮಪಂಚಾಯತ್ ಮಟ್ಟದ ಹೋಮರ್ ಯೋಜನೆಯನ್ನು ಪಂಚಾಯತ್ ಅಧ್ಯಕ್ಷೆ ಖದೀಜತ್ ರೀಸಾನ ಉದ್ಘಾಟಿಸಿದರು. ಸಿ.ಡಿ.ಎಸ್. ಅಧ್ಯಕ್ಷೆ ಸುಶೀಲಾ, ಮೆಂಬರ್ ಸೆಕ್ರಟರಿ ದೀಪ್ತೇಶ್, ಲೆಕ್ಕಾಧಿಕಾರಿ ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.