ಕಾಸರಗೋಡು: ಬದುಕಿನ ವಿವಿಧ ಹಂತಗಳಲ್ಲಿ ಸಂದಿಗ್ಧತೆಯನ್ನು ಎದುರಿಸಿ ಗೆದ್ದ ಕುಟುಂಬ ಶ್ರೀ ಸದಸ್ಯರು ಜಿಲ್ಲಾ ಮಿಷನ್ ನ ಟಾಕ್ ಶೋ ಮೂಲಕ ಸಮಾಜದೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಕೋವಿಡ್ ಅವಧಿಯಲ್ಲಿ ಅನೇಕ ಮುಗ್ಗಟ್ಟಿನ ಸಿಕ್ಕಿಗೆ ಸಿಲುಕಿದ ಅನೇಕ ಕುಟುಂಬ ಶ್ರೀ ಸದಸ್ಯರು, ಬಾಲಸಭೆ ಕಾರ್ಯಕರ್ತರು, ಕೃಷಿಕರು ಮೊದಲಾದವರಿಂದ ತೊಡಗಿ ಸಮಾಜದ ವಿವಿಧ ವಲಯಗಳ ಮಂದಿಗೆ ಕ್ರಿಯಾತ್ಮಕ, ಸ್ವಾವಲಂಬಿ ಬದುಕಿನತ್ತ ಪ್ರಚೋದನೆ ನೀಡುವ ಮೂಲಕ ಟಾಕ್ ಶೋ ತನ್ನ ಪಯಣ ಮುಂದುವರಿಸುತ್ತಿದೆ.
ಈ ಬಾರಿಯ ಲಾಕ್ ಡೌನ್ ಅವಧಿಯಲ್ಲಿ "ಅವಕಾಶಗಳ ಕಿಟಿಕಿ" ಎಂಬ ಆನ್ ಲೈನ್ ಕಾರ್ಯಕ್ರಮವನ್ನು ಕುಟುಂಬಶ್ರೀ ನಡೆಸಿದೆ. ಉದ್ದಿಮೆ ಆರಂಭಿಸುವ ವೇಳೆ ಗಮನಿಸಬೇಕಾದ ವಿಚಾರಗಳು, ಗಳಿಸಬೇಕಾದ ಪರವಾನಗಿಗಳು, ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ನಡೆಸುವ ಚಟುವಟಿಕೆಗಳು ಇತ್ಯಾದಿಗಳನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ಇದಾಗಿದೆ. ವಿವಿಧ ವಲಯಗಳ ಪರಿಣತರನ್ನು ಪಾಲ್ಗೊಳಿಸಿ ತರಗತಿ ನಡೆಸುವುದು, ಆಸಕ್ತಿ ಪ್ರಕಟಿಸಿದವರಿಗೆ ಅಗತ್ಯದ ಬೆಂಬಲ, ಈ ರೀತಿ ಯತ್ನಿಸಿ ಗೆದ್ದವರ ಕಥೆಗಳು ಇತ್ಯಾದಿಗಳನ್ನು ಹಂಚುವುದು ಇಲ್ಲಿನ ಪ್ರಧಾನ ವಿಷಯಗಳು. ಸಾಮಾಜಿಕ ಜಾಲತಾಣಗಳ ಮೂಲಕ ನಡೆಸಲಾಗುವ ಈ ಕಾರ್ಯಕ್ರಮದಲ್ಲಿ ಅನೇಕ ಮಂದಿ ಭಾಗವಹಿಸಿದ್ದಾರೆ. ಈಗಾಗಲೇ 35 ಮಂದಿ ಸ್ವಾವಲಂಬನೆಯಿಂದ ಗೆದ್ದವರು ತಮ್ಮ ಯಶೋಗಾಥೆಯನ್ನು ಈ ಮೂಲಕ ಹಂಚಿಕೊಂಡಿದ್ದಾರೆ.