ನವದೆಹಲಿ: ಹೊಸ ಐಟಿ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸಮನ್ಸ್ ಪಡೆದು ಹಾಜರಾಗಿದ್ದ ಟ್ವಿಟರ್ ಅಧಿಕಾರಿಗಳನ್ನು ಸಂಸದೀಯ ಸಮಿತಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ತಡೆಗೆ ಸಂಬಂಧಿಸಿದಂತೆ ಇರುವ ಶಶಿ ತರೂರ್ ನೇತೃತ್ವದ ಸಮಿತಿ ಕಳೆದ ವಾರ ಟ್ವಿಟರ್ ಇಂಡಿಯಾಗೆ ಸಮನ್ಸ್ ಜಾರಿ ಮಾಡಿತ್ತು. ಟ್ವಿಟರ್ ಇಂಡಿಯಾದ ಸಾರ್ವಜನಿಕ ನೀತಿ ವ್ಯವಸ್ಥಾಪಕರಾದ ಶಗುಫ್ತಾ ಕಮ್ರಾನ್ ಹಾಗೂ ಕಾನೂನು ವಿಭಾಗದ ಆಯುಷಿ ಕಪೂರ್ ಸಮಿತಿಯ ಎದುರು ಹಾಜರಾಗಿದ್ದರು.
ಹೊಸ ಐಟಿ ನಿಯಮ ಪಾಲನೆ ಹಾಗೂ ದೇಶದ ಕಾನೂನಿಗೆ ಟ್ವಿಟರ್ ಬದ್ಧವಾಗಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ- ಸಾಮಾಜಿಕ ಜಾಲತಾಣದ ಸಂಸ್ಥೆ ನಡುವಿನ ಸಂಘರ್ಷದ ಬೆನ್ನಲ್ಲೇ ಈ ಸಭೆ ನಡೆದಿದ್ದು, "ದೇಶದ ಕಾನೂನು ಸರ್ವೋಚ್ಛವೇ ಹೊರತು ನಿಮ್ಮ ನೀತಿಗಳಲ್ಲ" ಎಂದು ಟ್ವಿಟರ್ ಗೆ ಸಂಸದೀಯ ಸಮಿತಿ ಹೇಳಿದೆ. ದೇಶದ ಕಾನೂನನ್ನು ಉಲ್ಲಂಘನೆ ಮಾಡುತ್ತಿರುವ ಟ್ವಿಟರ್ ಗೆ ಏಕೆ ದಂಡ ವಿಧಿಸಬಾರದು ಎಂದೂ ಸಮಿತಿಯ ಸದಸ್ಯರು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಲೋನಿಯಲ್ಲಿ ಹಿರಿಯ ವ್ಯಕ್ತಿಯ ಮೇಲೆ ನಡೆದ ಹಲ್ಲೆಯ ವಿಡಿಯೋ ವೈರಲ್ ಆಗತೊಡಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಗುರುವಾರ ಟ್ವಿಟರ್ ನ ವ್ಯವಸ್ಥಾಪಕ ನಿರ್ದೇಶಕ ಟ್ವಿಟರ್ ಇಂಡಿಯಾದ ಮನೀಷ್ ಮಹೇಶ್ವರಿಗೆ ಕಾನೂನು ನೊಟೀಸ್ ಜಾರಿಗೊಳಿಸಿ, ಸಮಾಜ ವಿರೋಧಿ ಸಂದೇಶ ಹೊಂದಿರುವ ಸಂದೇಶವನ್ನು ವೈರಲ್ ಆಗಲು ಬಿಟ್ಟಿದ್ದೇಕೆ ಎಂಬುದಕ್ಕೆ ಹೇಳಿಕೆ ನೀಡಲು ಸೂಚಿಸಿದ್ದರು. 20 ದಿನಗಳಲ್ಲಿ ಟ್ವಿಟರ್ ನ ಎಂಡಿ ಅವರನ್ನು 2 ನೇ ಬಾರಿಗೆ ವಿಚಾರಣೆಗೆ ಕರೆಯಲಾಗಿದೆ.