ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಿಬಿಎಸ್‌ಇ ಅಂಗಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ದಿಢೀರ್ ಆಗಿ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದು ವಿದ್ಯಾರ್ಥಿಗಳಿಗೆ ಅಚ್ಚರಿಯೊಂದಿಗೆ ಸಂತಸ ಉಂಟಾಗಿದೆ.
ಪ್ರಧಾನಿ ಮೋದಿ ಗುರುವಾರ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೊಂದಿಗೆ, ವಿದ್ಯಾರ್ಥಿಗಳ ಪೋಷಕರೊಂದಿಗೆ, 12 ನೇ ತರಗತಿ ಪರೀಕ್ಷೆಯ ರದ್ದತಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಗಣಿಸಿ ಬೋರ್ಡ್ ಪರೀಕ್ಷೆ ರದ್ದತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸಂತಸವಾಗಿದೆಯೇ ಎಂದು ತಮಾಷೆಯಾಗಿ ವಿದ್ಯಾರ್ಥಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಳಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳು ಪರೀಕ್ಷೆಗಳ ವಿಚಾರದಲ್ಲಿ ಎಂದಿಗೂ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲೇ ಪರೀಕ್ಷೆ ರದ್ದಾದ ಬಳಿಕ ವಿದ್ಯಾರ್ಥಿಗಳು ಏನು ಮಾಡುತ್ತೀರಿ, ಹೇಗೆ ಸಮಯ ಕಳೆಯುತ್ತೀರಿ ಎಂದು ಮೋದಿ ಪ್ರಶ್ನಿಸಿದ್ದು, "ಭಾರತದ ಯುವಕರು ಸಕಾರಾತ್ಮಕ ಮತ್ತು ಪ್ರಾಯೋಗಿಕವಾಗಿರಬೇಕು" ಎಂದರು.
"12 ನೇ ತರಗತಿಯ ವಿದ್ಯಾರ್ಥಿಗಳು ಯಾವಾಗಲೂ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಜೂನ್ 1 ರವರೆಗೆ, ನೀವೆಲ್ಲರೂ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರಬೇಕು" ಎಂದು ಕೂಡಾ ಈ ಸಂದರ್ಭದಲ್ಲೇ ಮೋದಿ ತಿಳಿಸಿದ್ದಾರೆ.
ಆರೋಗ್ಯವು ಸಂಪತ್ತು, ಅದನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಪ್ರಧಾನಿ, ದೈಹಿಕವಾಗಿ ಸದೃಢವಾಗಿರಲು ನೀವೇನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಹಲವಾರು ಆರೋಗ್ಯ ಸಚಿವರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಮೋದಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಫಲಿತಾಂಶ ಸಿದ್ಧತೆಗಾಗಿ, ಸಿಬಿಎಸ್‌ಇ ಶೀಘ್ರದಲ್ಲೇ ಮೌಲ್ಯಮಾಪನ ಮಾನದಂಡಗಳನ್ನು ಪ್ರಕಟಿಸಲಿದೆ.
12 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ಮಾನದಂಡಗಳನ್ನು ರೂಪಿಸಲು ಕನಿಷ್ಠ ಎರಡು ವಾರಗಳು ಬೇಕಾಗುತ್ತದೆ ಎಂದು ಸಿಬಿಎಸ್‌ಇ ಅಧಿಕಾರಿಗಳು ಹೇಳಿದ್ದಾರೆ.