ತಿರುವನಂತಪುರ: ಕೋವಿಡ್ ಹರಡುವಿಕೆ ಇನ್ನಷ್ಟು ಕುಂಠಿತಗೊಂಡು ಉತ್ತಮ ಪರಿಸ್ಥಿತಿ ಸನ್ನಿಹಿತವಾದಾಗ ಮೊದಲು ಆರಾಧನಾಲಯಗಳನ್ನು ತೆರೆಯಬಹುದಾಗಿದೆ ಎಂದು ಪ್ರಸ್ತುತ ಸರ್ಕಾರ ಭಾವಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಪ್ರಸ್ತುತದ ನಿಯಂತ್ರಣ ವ್ಯವಸ್ಥೆ ಮುಂದಿನ ಬುಧವಾರದವರೆಗೆ ಮುಂದುವರಿಯುತ್ತದೆ. ಸೋಂಕು ಹರಡುವಿಕೆಯು ಕ್ಷೀಣಿಸುತ್ತಿದ್ದರೂ, ಒಂದು ವಾರದ ನಂತರವೇ ಒಂದು ತೀರ್ಮಾನಕ್ಕೆ ಬರಬಹುದು. ಅದರಂತೆ ಮುಂದಿನ ಬುಧವಾರದ ಬಳಿಕ ಇನ್ನಷ್ಟು ರಿಯಾಯಿತಿಗಳನ್ನು ನೀಡಲಾಗುವುದು. ಆರಾಧನಾಲಯಗಳನ್ನು ಸಂಪೂರ್ಣವಾಗಿ ಮುಚ್ಚುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಅವರು ಹೇಳಿದರು.
ಒಂದು ವಾರದ ಬಳಿಕ ಮೌಲ್ಯ ನಿರ್ಣಯ ಮಾಡಲಾಗುವುದು. ಮಂಗಳವಾರ ಪರಿಶೀಲನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಆರಾಧನಾಲಯಗಳನ್ನು ತೆರೆಯಬೇಕೆಂದು ವಿವಿಧ ಧಾರ್ಮಿಕ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಿಗೇ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿರುವರು. ಸೀರಿಯಲ್ ಶೂಟಿಂಗ್ ಸೇರಿದಂತೆ ಒಳಾಂಗಣ ಶೂಟಿಂಗ್ ಮತ್ತು ಹೋಟೆಲ್‍ಗಳಲ್ಲಿ ಕುಳಿತು ಆಹಾರ ಸೇವಿಸುವ ಕ್ರಮಗಳಿಗೆ ಒಂದು ವಾರದ ಅವಧಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಪ್ರಸ್ತುತ, ಸ್ಥಳೀಯ ಸಂಸ್ಥೆಗಳನ್ನು ಟಿಪಿಆರ್ ಆಧಾರದ ಮೇಲೆ ವರ್ಗೀಕರಿಸಲಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ರಾಜ್ಯದಲ್ಲಿ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಲಾಕ್ ಡೌನ್ ಹಂತದಲ್ಲಿ ಜನರು ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿ ವಿನಂತಿಸಿದರು. ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳು ಅಗತ್ಯ. ಡಬಲ್ ಮಾಸ್ಕ್ ಧರಿಸಲು ಮತ್ತು ಜನ ಸೇರುವಿಕೆಯನ್ನು ಆದಷ್ಟು ನಿಯಂತ್ರಿಸಬೇಕು. ಮತ್ತು ಮನೆಯೊಳಗಿನವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಕಟ ಸಂವಹನ ಮತ್ತು ಜನಸಂದಣಿ ಉಂಟಾಗಬಾರದು. ಅಂಗಡಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಸಿಎಂ ವಿನಂತಿಸಿದರು.