ಹೈದರಾಬಾದ್: ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಅನ್ನು ಡೋಸ್‌ಗೆ 150ರ ದರವು ದೀರ್ಘಾವಧಿಯಲ್ಲಿ ಸುಸ್ಥಿರವಾದುದಲ್ಲ ಎಂದು ಭಾರತ್ ಬಯೊಟೆಕ್ ಸಂಸ್ಥೆ ಹೇಳಿದೆ. ಮಾರುಕಟ್ಟೆ ವೆಚ್ಚವನ್ನು ಸರಿತೂಗಿಸಲು ಖಾಸಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ನಿಗದಿಪಡಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.
ಖಾಸಗಿ ವಲಯಕ್ಕೆ ಪೂರೈಕೆ ಕುರಿತ ದರ ಪರಿಷ್ಕರಣೆಯು ಏರುಮುಖವಾಗಿರಲಿದೆ ಎಂದು ಸಂಸ್ಥೆಯು ಹೇಳಿದೆ. ವಿತರಣಾ ವೆಚ್ಚ, ಲಾಭಾಂಶ ಕಡಿಮೆ ಇರುವುದು ಸೇರಿದಂತೆ ಹಲವು ಕಾರಣಗಳನ್ನು ಸಂಸ್ಥೆಯು ಉಲ್ಲೇಖಿಸಿದೆ.
ಭಾರತ್ ಬಯೊಟೆಕ್ ಸಂಸ್ಥೆಯು ಪ್ರಸ್ತುತ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರತಿ ಡೋಸ್‌ಗೆ 150ರ ದರದಲ್ಲಿ ಕೇಂದ್ರ ಸರ್ಕಾರಕ್ಕೆ, 400 ದರದಲ್ಲಿ ರಾಜ್ಯ ಸರ್ಕಾರಕ್ಕೆ ಹಾಗೂ 1,200 ದರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಒಟ್ಟು ಉತ್ಪಾದನೆಯಲ್ಲಿ ಶೇ 10ರಷ್ಟು ಕೋವ್ಯಾಕ್ಸಿನ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಪುರೈಸಲಾಗುತ್ತಿದ್ದು, ಉಳಿದಿದ್ದನ್ನು ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ಪೂರೈಸಲಾಗುತ್ತಿದೆ.
ಪ್ರಸ್ತುತ 500 ಕೋಟಿಗೂ ಅಧಿಕ ಮೊತ್ತವನ್ನು ತನ್ನದೇ ಸಂಪನ್ಮೂಲದಿಂದ ಉತ್ಪನ್ನ ಅಭಿವೃದ್ಧಿ, ಕ್ಲಿನಿಕಲ್ ಟ್ರಯಲ್, ಉತ್ಪಾದನಾ ಘಟಕಕ್ಕೆ ಹೂಡಿಕೆ ಮಾಡಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.