ತಿರುವನಂತಪುರ: ಭಯೋತ್ಪಾದಕ ಸಂಘಟನೆಗಳಿಗೆ ಕೇರಳದಂತಹ ರಾಜ್ಯಗಳಿಂದ ಜನರು ಬೇಕಾಗುತ್ತದೆ, ಇಲ್ಲಿಯ ಉನ್ನತ ಮಟ್ಟದ ಶಿಕ್ಷಣ ಇದಕ್ಕೆ ಕಾರಣ ಎಂಬ ಇಂದು ನಿವೃತ್ತರಾದ ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾರ ಹೊಸ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಐಎಸ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ನೇಮಕಾತಿ ಪ್ರಯತ್ನಗಳು ಮುಂದುವರಿಯಬಹುದಾದರೂ ಕೇರಳ ಸುರಕ್ಷಿತವಾಗಿದೆ ಎಂದು ಡಿಜಿಪಿ ಇಂದು ಹೇಳಿರುವರು. 2016-2017ರ ಅವಧಿಯಲ್ಲಿ ಕೇರಳದಿಂದ ಐಎಸ್ ನೇಮಕಾತಿ ಮಾಡಲಾಗಿತ್ತು. ನಂತರದ ನೇಮಕಾತಿ ಪ್ರಯತ್ನಗಳನ್ನು ತಡೆಯಲು ಪೋಲೀಸರಿಗೆ ಸಾಧ್ಯವಾಗಿದೆ ಎಂದಿರುವರು.
ಐಎಸ್ ಗುರಿಯಿಟ್ಟುಕೊಂಡ ರಾಜ್ಯಗಳಲ್ಲಿ ಕೇರಳವೂ ಒಂದು. ಇಲ್ಲಿಯ ಉನ್ನತ ಮಟ್ಟದ ಶಿಕ್ಷಣದ ಕಾರಣ, ಅವರು ಕೇರಳದಿಂದ ಹೆಚ್ಚಿನ ನೇಮಕಾತಿಯನ್ನು ಪರಿಗಣಿಸಿರಬಹುದು. ಆದರೆ ಇದನ್ನು ತಡೆಯಲು ರಾಜ್ಯ ಪೋಲೀಸರು ಸುಸಜ್ಜಿತರಾಗಿದ್ದಾರೆ ಎಂದು ಬೆಹ್ರಾ ಮಾಧ್ಯಮಗಳಿಗೆ ತಿಳಿಸಿರುವರು.