ನವದೆಹಲಿ: ವಾಹನ ಚಾಲನಾ ಪರವಾನಗಿ (ಡಿಎಲ್) ಪಡೆಯಬೇಕು ಎಂದು ಇಷ್ಟು ವರ್ಷ ಆರ್‌ಟಿಓ ಕಚೇರಿ ಅಲೆದಾಡಿ ಸುಸ್ತಾದವರಿಗೆ ಲೆಕ್ಕವೇ ಇಲ್ಲ, ಇಲ್ಲವೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಟ್ಟು ಪರವಾನಗಿ ಪಡೆದವರಿಗಂತೂ ಲೆಕ್ಕವೇ ಇಲ್ಲ.
ಇನ್ಮುಂದೆ ಈ ರೀತಿ ಮಾಡುವ ಅಗತ್ಯವೇ ಇಲ್ಲ. ಕಚೇರಿಗೂ ಹೋಗಬೇಕಿಲ್ಲ, ಏಜೆಂಟ್ ಸಂಪರ್ಕಿಸಬೇಕು ಎಂದೂ ಇಲ್ಲ. ಇಂಥದ್ದೊಂದು ವಿಶೇಷ ಸವಲವತ್ತನ್ನು ಕೇಂದ್ರ ಸರ್ಕಾರ ವಾಹನ ಸವಾರರಿಗೆ ನೀಡಿದೆ. ಮನೆಯಲ್ಲೇ ಕುಳಿತುಕೊಂಡು ಚಾಲನಾ ಪರವಾನಗಿಯನ್ನು ಪಡೆದುಕೊಳ್ಳಬಹುದಾಗಿದ್ದು, ಈ ನಿಯಮ ಜುಲೈ 1 ರಿಂದಲೇ ಜಾರಿಗೆ ಬರಲಿದೆ.
ಈ ಹೊಸ ನಿಯಮದ ಪ್ರಕಾರ ಖಾಸಗಿ ತರಬೇತಿ ಕೇಂದ್ರದವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು ಅನುಮತಿ ನೀಡಲಾಗಿದೆ. ಇದರರ್ಥ ಮಾನ್ಯತೆ ಹೊಂದಿದ ಸಂಸ್ಥೆಗಳು ಸರ್ಕಾರದ ನಿಯಮದಂತೆ ತರಬೇತಿ ನೀಡುತ್ತವೆ. ಪರೀಕ್ಷೆ ಪಾಸ್ ಮಾಡುವ ಅಧಿಕಾರವೂ ಅವರ ಕೈಯಲ್ಲಿಯೇ ಇದೆ. ಡ್ರೈವಿಂಗ್ ಟ್ರ್ಯಾಕ್, ಬಯೋಮೆಟ್ರಿಕ್, ತಂತ್ರಜ್ಞಾನ ವ್ಯವಸ್ಥೆ ಹೊಂದಿದ ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಪರವಾನಗಿ ನೀಡಲಿದ್ದು, ಅವು ಲೈಸೆನ್ಸ್ ನೀಡಲಿವೆ.
ಹಾಗೆಂದು ಆ ಸಂಸ್ಥೆಗಳಿಗೆ ಒಂದಿಷ್ಟು ದುಡ್ಡು ಕೊಟ್ಟರೆ ಪರವಾನಗಿ ಕೊಟ್ಟುಬಿಡುತ್ತಾರೆ ಬಿಡಿ ಎಂದುಕೊಳ್ಳುವಂತಿಲ್ಲ. ಏಕೆಂದರೆ ಇಲ್ಲಿ ಯಾವುದೇ ಅಡ್ಡದಾರಿಗೆ ಅವಕಾಶವೇ ಇಲ್ಲ. ಪರವಾನಿಗ ಪರೀಕ್ಷೆ, ತರಬೇತಿ ಸೇರಿ ಎಲ್ಲವೂ ಎಲೆಕ್ಟ್ರಾನಿಕ್ ವಿಧಾನದಲ್ಲಿ ದಾಖಲಾಗಲಿದೆ. ಇದನ್ನು ಸರ್ಕಾರದಿಂದ ಆಡಿಟ್ ಮಾಡಲಾಗುವ ಕಾರಣ ಅಡ್ಡಹಾದಿ ಹಿಡಿದರೆ ಸಿಕ್ಕಿಬೀಳುವ ಸಾಧ್ಯತೆ ಇದೆ.
ಒಂದೇ ಒಂದು ಬೇಸರದ ಸಂಗತಿ ಎಂದರೆ, ಈ ಹೊಸ ನಿಯಮದಿಂದ ಕಚೇರಿ ಅಲೆದಾಟ, ದಿನಗಟ್ಟಲೆ ಕಾಯುವುದು, ಏಜೆಂಟ್‌ಗೆ ದುಡ್ಡು ಕೊಡುವುದು ಇವೆಲ್ಲಾ ಇಲ್ಲದೇ ಹೋದರೂ ಪರವಾನಗಿ ಶುಲ್ಕ ಹೆಚ್ಚಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ, ಜತೆಗೆ ತರಬೇತಿಯೊಂದಿಗೆ ಲೈಸೆನ್ಸ್ ನೀಡಲು ಹೆಚ್ಚಿನ ಹಣ ನೀಡಬೇಕಾಗುವಬಹುದು. ಜುಲೈ 1 ರಿಂದ ಜಾರಿ ಬಂದ ಮೇಲೆ ಇದರ ಅನುಕೂಲ, ಅನನಕೂಲ ಇನ್ನಷ್ಟು ತಿಳಿಯಲಿದೆ.
ಇನ್ನು ಉತ್ತರಪ್ರದೇಶ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳು ಇನ್ನೂ ಸರಳೀಕರಣಗೊಳಿಸಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು, ಜತೆಗೆ ಡಿಎಲ್‌ಗೆ ಸಂಬಂಧಿಸಿದ ಎಲ್ಲಾ ಆಯ್ಕೆ ಪಡೆಯಬಹುದು. ಈ ಸೇವೆಯು ಜುಲೈ 1ರಿಂದ ಇತರ ರಾಜ್ಯಗಳಲ್ಲಿಯೂ ಅನ್ವಯ ಆಗಲಿದ್ದು, ಆನ್‌ಲೈನ್ ಸೌಲಭ್ಯ ಇರುವವರು ಆನ್‌ಲೈನ್ ಮೂಲಕವೂ ನೀವು ಹೊಸದಾಗಿ ಡಿಎಲ್ ಪಡೆಯುವುದು ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು. ಅದು ಹೀಗಿದೆ:
ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು, ನೀವು https://parivahan.gov.in ಅಥವಾ http://sarathiservice / newLLDet.doಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿದಾಗ ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ಇದರ ನಂತರ ನೀವು ಡಿಎಲ್ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಜಮಾ ಮಾಡಬೇಕಾಗುತ್ತದೆ.
ಕಲಿಕೆಯ ಚಾಲನಾ ಪರವಾನಗಿ ಪಡೆಯಲು ಈಗ ಆನ್‌ಲೈನ್ ಪರೀಕ್ಷೆ ಇರುತ್ತದೆ. ಮನೆಯಲ್ಲಿಯೇ ಕುಳಿತು ಅಥವಾ ಸೈಬರ್ ಕೆಫೆಗೆ ಹೋಗಿ ಪರೀಕ್ಷೆ ತೆಗೆದುಕೊಳ್ಳಬಹುದು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಕಲಿಕೆ ಪರವಾನಗಿ ನೀಡಲಾಗುವುದು.
ಹಂತಹಂತವಾಗಿ ಏನು ಮಾಡಬೇಕು ಎಂದು ಇಲ್ಲಿ ಮಾಹಿತಿ ನೀಡಲಾಗಿದೆ.
* ಸಾರಿಗೆ ಸಚಿವಾಲಯದ ವೆಬ್‌ಸೈಟ್‌ಗೆ https://parivahan.gov.in/parivahan//en ಗೆ ಭೇಟಿ ನೀಡಿ
* ಮುಖಪುಟದಲ್ಲಿ ಆನ್‌ಲೈನ್ ಸೇವೆಗಳ ಟ್ಯಾಬ್ ಕ್ಲಿಕ್ ಮಾಡಿ. ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
* ಡ್ರಾಪ್ ಡೌನ್ ಮೆನುವಿನಿಂದ 'ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು' ಆಯ್ಕೆಮಾಡಿ.
* ನೀವು ಸೇವೆಯನ್ನು ಬಯಸುವ 'ರಾಜ್ಯ' ಆಯ್ಕೆಮಾಡಿ
* ಹೊಸ ವಿಂಡೋ ತೆರೆಯುತ್ತದೆ. ಆಯ್ಕೆಯನ್ನು ಆರಿಸಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ. ಅಲ್ಲಿ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.