ಕಾಸರಗೋಡು: ಸಾಹಿತ್ಯ ಮತ್ತು ಸಿನೆಮಾದ ಅಂತರ್ ಸಂಬಂಧವನ್ನು ಪರಸ್ಪರ ಬೇಪಡಿಸುವುದಕ್ಕೆ ಸಾಧ್ಯವಿಲ್ಲ. ಸಿನೆಮಾವು ಸಾಂಘಿಕ ಕಲೆಯಾಗಿದ್ದು, ಸಮಾಜದ ಆಂತಯವನ್ನು ಶಕ್ತಿಯುತವಾಗಿ ಪ್ರತಿಬಿಂಬಿಸುವ ಮಾಧ್ಯಮವಾಗಿದೆ. ಮನುಷ್ಯನ ಭಾವಕೋಶವನ್ನು ತನ್ನ ತುದಿಕೈಲಿ ಹಿಡಿದಿಟ್ಟುಕೊಳ್ಳಬಲ್ಲಂತಹ ಏಕೈಕ ಸಾಧನ ಸಿನೆಮಾವಾಗಿದ್ದು ಸಾಹಿತ್ಯದ ನಂಟು ಸಿನೆಮಾವನ್ನು ಯಾಂತ್ರಿಕತೆಯಿಂದ ಪಾರಾಗಿಸಿದೆ ಎಂಬುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸಿನೆಮಾ ನಿದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಕನ್ನಡ ವಿಭಾಗವು ಶನಿವಾರ ವೆಬಿನಾರ್ ಮೂಲಕ ಆಯೋಜಿಸಿದ ಸರಣಿ ಉಪನ್ಯಾಸ ಸಾಹಿತ್ಯಯಾನದ ನಾಲ್ಕನೇ ಉಪನ್ಯಾಸ ಕಾಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕನ್ನಡ ಚಲನಚಿತ್ರ ಸಾಹಿತ್ಯ* ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು *ಸಿನೆಮಾಕ್ಕೆ ಪ್ರತ್ಯೇಕವಾದ ಸೃಜನಶೀಲ ಸಾಹಿತ್ಯವಿದೆ. ಸಿನೆಮಾವು ದೃಶ್ಯ ಮಾಧ್ಯಮದ ಮೂಲಕ ಕಾಲದ ನಡಿಗೆಯನ್ನು ದಾಖಲಿಸುತ್ತದೆ. ಸಿನೆಮಾವನ್ನು ಕೇವಲ ತಾಂತ್ರಿಕ ಮಾಧ್ಯಮವಾಗಿ ನೋಡುವವರು ಭ್ರಮೆಗಳನ್ನು ಮಾತ್ರ ಬಿತ್ತುತ್ತಾರೆ. ಸಿನೆಮಾದ ಮೂಲ ಸಾಮಾಗ್ರಿ ಸಾಹಿತ್ಯವಾಗಿದ್ದು, ಇದನ್ನು ಅಥ ಮಾಡಿಕೊಂಡವರಿಗೆ ಸಿನೆಮಾದಲ್ಲಿ ಹೊಸ ಪ್ರಯೋಗಶೀಲತೆಯನ್ನು ತರುವುದಕ್ಕೆ ಸಾಧ್ಯವಾಗಿದೆ. ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೆಲ್ಲರೂ ಸಿನೆಮಾ ರಂಗದ ಜೊತೆಗೆ ಅನ್ಯೋನ್ಯ ನಂಟನ್ನು ಹೊಂದಿದ್ದರು. ಸಾಹಿತ್ಯ ಮತ್ತು ಚಲನಚಿತ್ರವು ಒಂದಕ್ಕೊಂದು ಪೂರಕವಾಗಿಯೇ ಬೆಳೆದುಬಂದಿದೆ* ಎಂದರು. ಬದುಕಿಂದು ದೃಶ್ಯ ಮಾಧ್ಯಮದ ಜತೆಗೆ ಸಮೀಕರಿಸಿಕೊಂಡಿದೆ ಎಂದ ಅವರು ಮಾಧ್ಯಮವನ್ನು ಪ್ರೀತಿಸಬೇಕು, ಗೌರವಿಸಬೇಕು, ಕಾಳಜಿಯಿಂದ ಮುನ್ನೋಟಕ್ಕೆ ಅಡಿಯನ್ನಿಡಬೇಕು ಎಂದು ಕರೆಕೊಟ್ಟರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಅವರು ಕನ್ನಡವನ್ನು ಕನ್ನಡೇತರ ಪ್ರದೇಶಗಳಲ್ಲಿ ಸ್ವೀಕರಿಸುವ ಕ್ರಮ ಅಭಿಮಾನ ಮೂಡಿಸುವಂತದ್ದು. ಕನ್ನಡವನ್ನು ಐಚ್ಛಿಕ ಭಾಷೆಯಾಗಿ ಕಲಿತು ಬರವಣಿಗೆ ಮೂಲಕ ನಾವು ಕೊಡುವ ಕೊಡುಗೆ ಅನನ್ಯವಾದುದು. ಸಿನೆಮಾ ಕ್ಷೇತ್ರವು ಈ ನಿಟ್ಟಿನಲ್ಲಿ ಹೇರಳ ಅವಕಾಶವನ್ನು ಒದಗಿಸುತ್ತದೆ. ಸಿನೆಮಾವು ಚಿಕ್ಕ ವಿಷಯವನ್ನೂ ಚೊಕ್ಕವಾಗಿ ಬಿಡಿಸಿಡುವ ಕ್ರಮ ಅಚ್ಚರಿ ಮೂಡಿಸುವಂತದ್ದು ಎಂದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸೌಮ್ಯಾ ಪಿ ಸ್ವಾಗತಿಸಿ, ಶಿವರಾಜು ಎಸ್ ವಂದಿಸಿದರು. ಬಬಿತಾ ಎ ಕಾಯಕ್ರಮ ನಿರೂಪಿಸಿದರು.