ಉಡುಪಿ: ಉಡುಪಿಯ ವ್ಯಕ್ತಿಯೊಬ್ಬರ ಮೈಯಲ್ಲಿ ಲೋಹದ ವಸ್ತುಗಳು ಅಯಸ್ಕಾಂತದಂತೆ ಅಂಟಿಕೊಳ್ಳುತ್ತವೆ. ಈ ವಿಷಯ ಭಾನುವಾರದಿಂದ ಆ ವ್ಯಕ್ತಿಗೆ ಗೊತ್ತಾಗಿದ್ದು, ಅಚ್ಚರಿಯ ಜೊತೆಗೆ ಅವರ ಆತಂಕಕ್ಕೂ ಕಾರಣವಾಗಿದೆ.
ಉಡುಪಿಯ ಪಿಪಿಸಿ ಕಾಲೇಜು ಸಮೀಪ ಮನೆ ಮಾಡಿಕೊಂಡಿರುವ ರಾಮದಾಸ್ ಶೇಟ್ ಮೂಲತಃ ಚಿನ್ನದ ಕೆಲಸ ಮಾಡುವವರು. ನಿನ್ನೆ ಯಾವುದೋ ವಾಟ್ಸಾಪ್ ವಿಡಿಯೋ ಒಂದನ್ನು ನೋಡಿದ ಅವರು, ಸ್ವತಃ ತಾವೂ ಕೂಡ ಅದರಂತೆ ಪ್ರಯತ್ನಿಸಿದ್ದಾರೆ. ಅಂದರೆ ವ್ಯಕ್ತಿಯೊಬ್ಬರ ದೇಹದಲ್ಲಿ ಲೋಹದ ವಸ್ತುಗಳು ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಇರುವ ವಿಡಿಯೋ ಅದಾಗಿತ್ತು.
ಆ ವಿಡಿಯೋ ನೋಡಿ ಅಚ್ಚರಿಗೊಂಡ ರಾಮದಾಸ್ ಶೇಟ್ ಕೂಡ ಪ್ರಯತ್ನಿಸಿದ್ದಾರೆ. ಅವರ ಮೈಯಲ್ಲೂ ಲೋಹಗಳು ಅಂಟಿಕೊಳ್ಳುವುದು ಕಂಡುಬಂದಿದೆ. ಇದರಿಂದ ಮನೆಯವರು ಅಚ್ಚರಿಗೆ ಒಳಗಾಗಿದ್ದಾರೆ. ಸ್ಪೂನ್, ನಾಣ್ಯ ಮತ್ತಿತರ ವಸ್ತುಗಳನ್ನು ಮೈಮೇಲೆ ಅಂಟಿಸಿ ಪ್ರಯತ್ನಪಟ್ಟಿದ್ದಾರೆ. ಅದು ಅವರ ಕೈಯಲ್ಲಿ ಆಂಟಿ ಕೊಳ್ಳುವುದರ ಜೊತೆಗೆ ಕೈಯನ್ನು ಅಲ್ಲಾಡಿಸಿದರೂ ಕೂಡ ಅದು ಕೆಳಗೆ ಬೀಳುತ್ತಿರಲಿಲ್ಲ.
ಇದರಿಂದ ಇನ್ನಷ್ಟು ಅಚ್ಚರಿಗೊಂಡ ರಾಮದಾಸ್ ಶೇಟ್ ಆತಂಕಕ್ಕೂ ಒಳಗಾಗಿದ್ದಾರೆ. ನನಗೆ ಮಕ್ಕಳಿದ್ದಾರೆ. ಈ ರೀತಿ ನನ್ನ ದೇಹದಲ್ಲಿರುವ ಆಯಸ್ಕಾಂತೀಯ ಶಕ್ತಿಯ ಬಗ್ಗೆ ನನಗೆ ಹಿಂದೆ ಗೊತ್ತಿರಲಿಲ್ಲ, ಈಗ ಆತಂಕ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದವರೇ ಹೇಳಬೇಕಿದೆ ಎಂದು ಹೇಳಿದ್ದಾರೆ. ಸದ್ಯ ಈ ವಿಸ್ಮಯ ನೋಡಲು ಅವರ ಮನೆಗೆ ಜನರು ಎಡತಾಕುತ್ತಿದ್ದಾರೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ
ರಾಮದಾಸ್ ಶೇಟ್ ಎಂಬ ವ್ಯಕ್ತಿಯ ದೇಹದಲ್ಲಿ ಕಂಡುಬಂದ ಅಯಸ್ಕಾಂತೀಯ ಲಕ್ಷಣ ಕಂಡುಬಂದ ಹಿನ್ನೆಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ ನೀಡಿದ್ದು, "ರಾಮದಾಸ್ ಎಂಬವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ದೇಹದಲ್ಲಿ ಅಯಸ್ಕಾಂತೀಯ ಗುಣ ಕಂಡುಬಂದಿದೆ. ಹಣೆ, ಬೆನ್ನು, ಹೊಟ್ಟೆ, ಭುಜ, ಮೊಣಕೈ ಭಾಗದಲ್ಲಿ ಅಯಸ್ಕಾಂತೀಯ ಲಕ್ಷಣ ಕಂಡುಬಂದಿದೆ.''
"ರಾಮದಾಸ್ ವ್ಯಾಕ್ಸಿನ್ ಪಡೆದುಕೊಂಡ ಮೇಲೆ ಈ ಲಕ್ಷಣ ಕಂಡುಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ವ್ಯಾಕ್ಸಿನ್‌ನಿಂದ ದೇಹದಲ್ಲಿ ಈ ಲಕ್ಷಣ ಬಂದಿರಲು ಸಾಧ್ಯವಿಲ್ಲ. ಅವರಿಗೆ ಬಿಪಿ ಹಾಗೂ ಶುಗರ್ ಇದೆ. ಆದರೆ, ಅಯಸ್ಕಾಂತೀಯ ಲಕ್ಷಣ ಹೇಗೆ ಬಂತು ಅನ್ನುವುದನ್ನು ತಿಳಿದುಕೊಳ್ಳಲು ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕಿದೆ,'' ಎಂದು ಜಿಲ್ಲಾಧಿಕಾರಿ ತಿಳಿಸಿದರು.