ತಿರುವನಂತಪುರ: ರಾಜ್ಯ ಉನ್ನತ ಶಿಕ್ಷಣ ಸಚಿವೆ ಅರ್.ಬಿಂದು ಅವರು ರಾಜ್ಯಪಾಲರ ಎದುರು ಮತ್ತೆ ಪ್ರಮಾಣವಚನ ಸ್ವೀಕರಿಸಬೇಕೆಮನದು ಸೇವ್ ಯೂನಿವರ್ಸಿಟಿ ಕ್ಯಾಂಪೇನ್ ಕಮಿಟಿ ಒತ್ತಾಯಿಸಿದೆ.
ಈ ಹಿಂದೆ ನಡೆದ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಸಚಿವೆ ನಿಯಮ ಉಲ್ಲಂಘನೆ ನಡೆಸಿರುವುದು ಸಾಬೀತಾದ ಕಾರಣ ಸರ್ಕಾರವೇ ವಿಶೇಷ ಗೆಜೆಟ್ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಈ ಒತ್ತಾಯ ಕೇಳಿ ಬಂದಿದೆ.
ಮೇ 20 ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಉನ್ನತ ಶಿಕ್ಷಣ ಸಚಿವೆ ತಮ್ಮ ಹೆಸರನ್ನು ಡಾ. ಅರ್. ಬಿಂದು ಎಂದಿರುವುದನ್ನು ಪ್ರೊಫೆಸರ್.ಆರ್.ಬಿಂದು ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಜೂನ್ 8 ರಂದು ಮುಖ್ಯ ಕಾರ್ಯದರ್ಶಿ ಡಾ.ವಿ.ಪಿ. ಜೋಯಿ ಅಸಾಮಾನ್ಯ ಎಂಬ ನೆಲೆಯ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದರು.
ಸಚಿವೆಯು 'ಪ್ರೊಫೆಸರ್. ಆರ್.ಬಿಂದು ಎಂಬ ನಾನು' ಹೆಸರಿನಲ್ಲಿ ರಾಜ್ಯಪಾಲರ ಮುಂದೆ ಪ್ರಮಾಣ ವಚನ ಸ್ವೀಕರಿಸಿದ್ದರು. ತ್ರಿಶೂರ್‌ನ ಕೇರಳ ವರ್ಮಾ ಕಾಲೇಜಿನ ಶಿಕ್ಷಕಿಯಾಗಿರುವ ಬಿಂದು ಅವರು ಪ್ರೊಫೆಸರ್ ಅಲ್ಲವೆಂದೂ,ಇದು ವ್ಯಕ್ತಿ ಪಲ್ಲಟ ಅಪರಾಧಕ್ಕೆ ಸಮಾನವೂ, ಸಂವಿಧಾನ ವಿರುದ್ದದ ಕ್ರಮವಾಗಿದೆ ಎಂದು ಸರ್ಕಾರವೇ ಸ್ವತಃ ಒಪ್ಪಿಕೊಂಡು ವಿಜ್ಞಾಪನೆ ಹೊರಡಿಸಿ ತಪ್ಪನ್ನು ಸರಿಪಡಿಸಲು ಸಚಿವೆಗೆ ಸೂಚಿಸಿ ರಾಜ್ಯಪಾಲರಿಗೆ ಮಾಹಿತಿ ನೀಡಿತ್ತು.