ನಾನು ರೋಮನ್ ಕ್ಯಾಥೋಲಿಕ್ ಹುಡುಗಿ. 24 ವರ್ಷ. 5.4 ಅಡಿ ಎತ್ತರವಿದ್ದೇನೆ. ಗಣಿತದಲ್ಲಿ ಎಂಎಸ್ಸಿ ಆಗಿದೆ. ಸ್ವಯಂ ಉದ್ಯೋಗ ಹೊಂದಿದ್ದೇನೆ. ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಹಾಕಿಸಿಕೊಂಡಿದ್ದೇನೆ.
28-30 ವರ್ಷದ ರೋಮನ್ ಕ್ಯಾಥೋಲಿಕ್‌ಗೆ ಸೇರಿದ ವರ ಬೇಕು. ಪಿಜಿ ಮಾಡಿರಬೇಕು. ಸ್ವತಂತ್ರನಾಗಿರಬೇಕು, ತಾಳ್ಮೆಯುಳ್ಳವನು, ಹಾಸ್ಯ ಭರಿತ ಸ್ವಭಾವಿ ಮತ್ತು ಪುಸ್ತಕ ಓದುವ ಹವ್ಯಾಸ ಇರುವವನು ಬೇಕು. ಕೋವಿಶೀಲ್ಡ್‌ನ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
- ಹೀಗೊಂದು ವಧು-ವರರ ವೇದಿಕೆಯ ಜಾಹೀರಾತನ್ನು ನೋಡಿ ಕಕ್ಕಾಬಿಕ್ಕಿಯಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಕೊರೊನಾ ಲಸಿಕೆಯೇ ಮದುವೆಯ ಉಡುಗೊರೆಯಾಗುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ. ನಮ್ಮ ಮುಂದಿನ ದಿನಗಳು ಹಿಂದಿನ ದಿನಗಳಂತೆ ಸಹಜವಾಗಿರಲಿವೆಯೇ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಜೂನ್ 4ರಂದು ಪ್ರಕಟವಾದ ಜಾಹೀರಾತನ್ನು ಟ್ವೀಟ್ ಮಾಡಿರುವ ಶಶಿ ತರೂರ್ 'ಲಸಿಕೆ ಹಾಕಿಸಿಕೊಂಡ ವಧುವಿನಿಂದ ಲಸಿಕೆ ಹಾಕಿಸಿಕೊಂಡಿರುವ ವರನ ಅನ್ವೇಷಣೆ!' ಎಂದು ವಧು-ವರರನ್ನು ಕಾಲೆಳೆದಿದ್ದಾರೆ.
'ನೀವೀಗಲೂ ವಧು-ವರರ ಅನ್ವೇಷಣೆಯಲ್ಲಿ ಬಂದ ಜಾಹೀರಾತನ್ನು ನೋಡುತ್ತಿದ್ದೀರಾ?' ಎಂದು ಕೆಲವು ನೆಟ್ಟಿಗರು ಶಶಿ ತರೂರ್ ಅವರ ಕಾಲನ್ನೇ ಹಿಡಿದೆಳೆದಿದ್ದಾರೆ.