ನವದೆಹಲಿ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವೀಟರ್ ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದೇ ಅಲ್ಲದೆ, ಹೊಸ ಕಾನೂನುಗಳಿಗೆ ಬದ್ಧವಾಗಿರದ ಏಕೈಕ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಎಂದು ಮೂಲಗಳು ತಿಳಿಸಿವೆ.
ಜೂನ್ 9ರಂದು ಸಾಮಾಜಿಕ ಮಾಧ್ಯಮ ಟ್ವೀಟರ್ ಐಟಿ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಒಪ್ಪಂದದ ಆಧಾರದ ಮೇಲೆ ನೋಡಲ್ ವ್ಯಕ್ತಿ(ಎನ್‌ಸಿಪಿ) ಮತ್ತು ಕುಂದುಕೊರತೆ ಅಧಿಕಾರಿ(ಆರ್‌ಜಿಒ) ಅವರನ್ನು ನೇಮಕ ಮಾಡಲಾಗಿದೆ. ಇನ್ನು ಮುಖ್ಯ ಅನುಸರಣೆ ಅಧಿಕಾರಿಯ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಟ್ವೀಟರ್ ತಿಳಿಸಿತ್ತು.
ಹೊಸ ಐಟಿ ನಿಯಮಗಳನ್ನು 'ತಕ್ಷಣ' ಅನುಸರಿಸುವಂತೆ ಕೇಂದ್ರ ಸರ್ಕಾರವು ಕೊನೆಯ ಅವಕಾಶ ನೀಡಿ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಟ್ವೀಟರ್ ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿತ್ತು.
ಹೊಸ ಮಧ್ಯವರ್ತಿ ಮಾರ್ಗಸೂಚಿ ನಿಯಮಗಳು ಮೇ 26ರಿಂದ ಜಾರಿಗೆ ಬಂದಿವೆ ಎಂದು ಸಚಿವಾಲಯ ಪತ್ರದಲ್ಲಿ ತಿಳಿಸಿತ್ತು. ನಿಯಮಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ನಿಬಂಧನೆಗಳು ಈಗಾಗಲೇ ಅಂದರೆ 2021ರ ಮೇ 26ರಿಂದಲೇ ಜಾರಿಗೆ ಬಂದಿವೆ. ಅಲ್ಲದೆ ಟ್ವೀಟರ್ ಗೆ ನೋಟಿಸ್ ನೀಡಿ ವಾರ ಕಳೆದರೂ ಈ ನಿಯಮಗಳ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ತಿಳಿದುಬಂದಿದೆ.