ನವ ದೆಹಲಿ ; ಪ್ರಧಾನಿ ನರೇಂದ್ರ ಮೋದಿ ಜೂನ್.24 ರಂದು ಜಮ್ಮು-ಕಾಶ್ಮೀರದಲ್ಲಿ ಸರ್ವ ಪಕ್ಷಗಳ ಸಭೆಗೆ ಕರೆ ನೀಡಿದ್ದು, ಎಲ್ಲಾ ಪಕ್ಷದ ನಾಯಕರು ಗಳಿಗೂ ಅನೌಪಚಾರಿಕ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷದ ಮಾಜಿ ಮೈತ್ರಿ ಪಕ್ಷವಾಗಿದ್ದ ಪಿಡಿಪಿ ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ "ಸರ್ವ ಪಕ್ಷಗಳ ಸಭೆಗೆ ನನಗೆ ಆಹ್ವಾನ ಬಂಧಿದ್ದು, ಸಭೆಯಲ್ಲಿ ನಾನು ಭಾಗವಹಿಸಲಿದ್ದೇನೆ" ಎಂದು ಖಚಿತಪಡಿಸಿದ್ದಾರೆ. ಆಗಸ್ಟ್ 5 2019 ರಂದು ಕೇಂದ್ರ ಸರ್ಕಾರ ಏಕಾ ಏಕಿ ಸಂವಿಧಾನದ ಅನುಚ್ಛೇಧ 370 ರ ಅಡಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ಕಿತ್ತುಕೊಂಡು ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಹೀಗೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡ ನಂತರ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಸರ್ವ ಪಕ್ಷಗಳ ಸಭೆ ಇದಾಗಿದೆ.
ಕಳೆದ 2 ವರ್ಷಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ಸಾಕಷ್ಟು ಬಂಧನಗಳಾಗಿವೆ. ಫಾರುಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಕಾಶ್ಮೀರದ ನಾಯಕರನ್ನೆಲ್ಲ ಕೇಂದ್ರ ಸರ್ಕಾರ ಬಂಧನದಲ್ಲಿ ಇರಿಸಿತ್ತು. ಕಾಶ್ಮೀರಿಗಳ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿತ್ತು. 22 ತಿಂಗಳ ನಂತರವೂ ಜಮ್ಮು ಕಾಶ್ಮೀರದಲ್ಲಿ ನಿರ್ಭಂಧಗಳು ತೆರವಾಗಿಲ್ಲ. ಈಗ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಜೊತೆ ಸರ್ವಪಕ್ಷ ಸಭೆಯನ್ನು ನಡೆಸಲು ಮುಂದಾಗಿದೆ. 22 ತಿಂಗಳುಗಳ ನಂತರ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಷಯದಲ್ಲಿ ತನ್ನ ಕಾಠಿಣ್ಯವನ್ನು ಒಂದಷ್ಟು ಸಡಿಲಿಸಿದಂತೆ ಕಾಣುತ್ತಿದೆ.
ಜೂನ್ 24 ರಂದು ಪ್ರಧಾನಿ ಮೋದಿ ಜಮ್ಮು ಕಾಶ್ಮೀರದ ಎಲ್ಲಾ ರಾಜಕೀಯ ನಾಯಕರ ಜೊತೆ ದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ. ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನೂ ಪ್ರಧಾನಿಗಳೇ ವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮತಕ್ಷೇತ್ರಗಳ ಮರು ವಿಂಗಡಣೆ ಮತ್ತು ಹಿಂದೆ ನೀಡಲಾಗಿದಗ್ದ ವಿಶೇಷ ಸ್ಥಾನಮಾನವನ್ನು ಮರಳಿ ನೀಡುವ ಕುರಿತು ಪ್ರಧಾನಿಯವರೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಜಮ್ಮು ಕಾಶ್ಮೀರದ ರಾಜಕೀಯ ನಾಯಕರುಗಳು ತಿಳಿಸಿದ್ದಾರೆ.
ಶುಕ್ರವಾರದವರೆಗೆ ಜಮ್ಮು-ಕಾಶ್ಮೀರದ ಒಂಬತ್ತು ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡು ಪ್ರಮುಖ ಪಕ್ಷಗಳಿಗೆ ಈವರೆಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗಿಲ್ಲ. ಹೀಗಾಗಿ ರಾಜಕೀಯ ಪ್ರಕ್ರಿಯೆ ನಡೆಯಲು ಸಮಯವಿದೆ ಎಂದು ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಸಜಾದ್ ಲೋನ್ ಮತ್ತು ಅಪ್ನಿ ಪಕ್ಷದ ನಾಯಕ ಅಲ್ತಾಫ್ ಬುಖಾರಿ ಪುನರುಚ್ಚರಿಸಿದ್ದಾರೆ.