ಬದಿಯಡ್ಕ: ಕೋವಿಡ್ ಹಿನ್ನೆಲೆಯಲ್ಲಿ ಹೇರಿರುವ ಲಾಕ್ ಡೌನ್ ಕಾರಣ ಸರ್ಕಾರ ಅಸಂಬದ್ದ ರೀಯಾತಿಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರದ ತಪ್ಪು ನಿರ್ಧಾರಗಳನ್ನು ಪ್ರತಿಭಟಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯು ಗುರುವಾರ ರಾಜ್ಯಾದ್ಯಂತ ಅಂಗಡಿಗಳನ್ನು ಮುಚ್ಚಿ
ಗ್ರಾಮಾಧಿಕಾರಿಗಳ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಿತು. ಎಲ್ಲಾ ವ್ಯಾಪಾರ ಸಂಸ್ಥೆಗಳು ತೆರೆದು ಕಾರ್ಯಾಚರಿಸಲು ಅನುಮತಿ ನೀಡಬೇಕು, ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿ ಕೋವಿಡ್ ಪ್ರತಿರೋಧ ಎಂಬ ನಿಲುವನ್ನು ಕೊನೆಗೊಳಿಸಿರಿ, ವ್ಯಾಪಾರಿಗಳನ್ನು ಮತ್ತು ಕೆಲಸಗಾರರನ್ನು ಬದುಕಲು ಬಿಡಿ, ವ್ಯಾಪಾರಿಗಳಿಗೆ ಪ್ರತ್ಯೇಕ ಧನ ಸಹಾಯ ವ್ಯಾಕೇಜ್ ಜಾರಿಗೊಳಿಸಬೇಕು, ಪೋಲೀಸ್ ಮತ್ತು ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳ ಕಿರುಕುಳ ಕೊನೆಗೊಳಿಸಬೇಕು ಎಂಬ ಬೇಡಿಕೆಗಳನ್ನು ಈ ಸಂದರ್ಭ ಸರ್ಕಾರಕ್ಕೆ ಮುಟ್ಟಿಸಲು ಈ ಪ್ರತಿಭಟನೆ ನಡೆಸಲಾಯಿತು.
ಈ ಸಂಬಂಧ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ನೇತೃತ್ವದಲ್ಲಿ ಬೇಳ ಗ್ರಾಮಾಧಿಕಾರಿ ಕಚೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್. ಕಾರ್ಯದರ್ಶಿ ರವಿ ನೀರ್ಚಾಲು, ಕೋಶಾಧಿಕಾರಿ ಪ್ರಶಾಂತ್ ಪೈ, ಉಪಾಧ್ಯಕ್ಷ ನಾರಾಯಣ, ಜೊತೆ ಕಾರ್ಯದರ್ಶಿ ಗೋಪಾಲ ಬಿ. ಕೆ ಮತ್ತು ನೀರ್ಚಾಲು ಪೇಟೆಯ ವ್ಯಾಪಾರಿಗಳು ಭಾಗವಹಿಸಿದರು.