ತಿರುವನಂತಪುರ: ಕಾಸರಗೋಡು ಗಡಿಯಲ್ಲಿರುವ ಸ್ಥಳನಾಮಗಳನ್ನು ಬದಲಾಯಿಸುವ ಕ್ರಮವಿದೆ ಎಂಬ ಪ್ರಚಾರ ಆಧಾರರಹಿತವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಲ್ಲದಿರುವ ಸುದ್ದಿಗಳನ್ನು ಹೇಗೆ ಮಾಡುವುದು ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದು ಸಿಎಂ ಹೇಳಿದರು.
ಗಡಿ ಗ್ರಾಮಗಳ ಹೆಸರನ್ನು ಬದಲಾಯಿಸುವ ಬಗ್ಗೆ ಸರ್ಕಾರ ಯೋಚಿಸಿಲ್ಲ. ಈ ರೀತಿಯ ಸುದ್ದಿಗಳು ಹೇಗೆ ಬರುತ್ತವೆ ಎಂದು ನನಗೆ ತಿಳಿದಿಲ್ಲ. ಈ ಅಭಿಯಾನವು ರಾಜ್ಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕುಹಕಿಗಳದ್ದಾಗಿದೆ. ಇದರ ಹಿಂದೆ ಪಿತೂರಿ ಇರಬಹುದು ಎಂದು ಸಿಎಂ ಹೇಳಿದರು.
ಮಂಜೇಶ್ವರದಲ್ಲಿ ಸುಮಾರು 10 ಸ್ಥಳಗಳ ಹೆಸರನ್ನು ಮಲಯಾಳೀಕರಣಗೊಳಿಸಲು ಕೇರಳ ತಯಾರಿ ನಡೆಸುತ್ತಿದೆ ಎಂದು ಅಭಿಯಾನ ತಿಳಿಸಿದೆ. ಇದರ ಬೆನ್ನಲ್ಲೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಕರ್ನಾಟಕ ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ ಮತ್ತು ಕನ್ನಡ ಸಂಘಟನೆಗಳು ಹೆಸರು ಬದಲಾವಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಏತನ್ಮಧ್ಯೆ, ಅಂತಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಮತ್ತು ಪ್ರಚಾರವು ನಕಲಿ ಎಂದು ಸಿಎಂ ಹೇಳಿದ್ದಾರೆ.