ತಿರುವನಂತಪುರ: ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿರುವ ಕಾನೂನಿನಲ್ಲಿ ಸದ್ಯ ಯಾವುದೇ ಬದಲಾವಣೆಗಳಿಲ್ಲ. ಶೀಘ್ರದಲ್ಲಿ ಆರಾಧನಾಲಯಗಳನ್ನು ಭಕ್ತರ ಸೇವಾದಿಗಳಿಗೆ ತೆರೆಯಲಾಗುವುದಿಲ್ಲ ಎಂದು ರಾಜ್ಯ ಮುಜರಾಯಿ (ದೇವಸ್ವಂ) ಸಚಿವ ಕೆ.ಎನ್. ರಾಧಾಕೃಷ್ಣನ್ ಹೇಳಿರುವರು. ಪೂಜಾ ಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಾಗುವುದರಿಂದ ಸೋಂಕು ಹರಡುವ ಭೀತಿ ಇದೆ ಎಂದು ಅವರು ಹೇಳಿದರು. ದೇವಾಲಯಗಳಲ್ಲಿ ಆನ್‍ಲೈನ್ ಸೇವೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಮೂರನೇ ಅಲೆಯ ಸಾಧ್ಯತೆಯನ್ನು ಗಮನಿಸುವುದೂ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಭಕ್ತರನ್ನು ತಡೆಯುವುದು ಸರ್ಕಾರದ ಉದ್ದೇಶವಲ್ಲ ಎಂದು ರಾಧಾಕೃಷ್ಣನ್ ಹೇಳಿದರು. ಭಕ್ತರ ಆರೋಗ್ಯ ಮುಖ್ಯ. ಸೋಂಕು ಹರಡುವಿಕೆ ನಿಯಂತ್ರಣದಲ್ಲಿರುವುದರಿಂದ ರಿಯಾಯಿತಿ ಮುಂದೆ ನೀಡಲಾಗುವುದು. ನಿರ್ಬಂಧಗಳು ಯಾವುದೇ ವ್ಯವಸ್ಥೆಗಳನ್ನು ನಾಶಗೊಳಿಸಲು ಅಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ನಿಬಂಧನೆಗಳೊಂದಿಗೆ ಆರಾಧನಾಲಯಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದರು. ಮದ್ಯ ಮಳಿಗೆಗಳು ಮತ್ತು ಬಾರ್‍ಗಳನ್ನು ತೆರೆಯಲು ಅವಕಾಶ ನೀಡಿರುವಾಗ ಆರಾಧನಾಲಯಗಳಿಗೆ ಮಾತ್ರ ನಿಷೇಧ ಹೇರಲಾಗದು ಎಂದು ಅವರು ಹೇಳಿದ್ದರು. ಭಕ್ತರ ಭಾವನೆಗಳನ್ನು ಗೌರವಿಸಲು ಸರ್ಕಾರ ಸಿದ್ಧರಾಗಿರಬೇಕು ಎಂದು ಸುರೇಂದ್ರನ್ ಒತ್ತಾಯಿಸಿದ್ದರು.