ನವದೆಹಲಿ: ಹಲವಾರು ಸಣ್ಣ ನಗರಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಸಮರ್ಪಕವಾಗಿಲ್ಲದ ಕಾರಣ, ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ʼಆಯುಷ್ಮಾನ್ ಭಾರತ್ʼ ನ ಬಹುತೇಕ ಮೊತ್ತವು ಖಾಸಗಿ ಆಸ್ಪತ್ರೆಗಳ ಪಾಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಸಲ್ಲಿಸಿದ್ದ ಅರ್ಜಿಯ ಮೂಲಕ ಬಹಿರಂಗಗೊಂಡಿದ್ದಾಗಿ newindianexpress ವರದಿ ಮಾಡಿದೆ.
ಈ ವರ್ಷದ ಮಾರ್ಚ್ 24 ರವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು ದಾಖಲಾತಿಗಳ ಸಂಖ್ಯೆ 74.91 ಲಕ್ಷವಾಗಿದ್ದರೆ, ಸಾರ್ವಜನಿಕ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಕೇವಲ 62.96 ಲಕ್ಷ ಮಾತ್ರ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸ್ವೀಕರಿಸಿದ ಉತ್ತರದಲ್ಲಿ ತಿಳಿಸಲಾಗಿದೆ.
ಈ ವರ್ಷದ ಮಾರ್ಚ್ 24 ರವರೆಗೆ ಫಲಾನುಭವಿಗಳಿಗೆ ಸರ್ಕಾರ ಖರ್ಚು ಮಾಡಿದ ಒಟ್ಟು 17,934 ಕೋಟಿ ರೂ.ಗಳಲ್ಲಿ 11,611 ಕೋಟಿ ಮೌಲ್ಯದ ಆಸ್ಪತ್ರೆ ಪ್ರವೇಶ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರಿ ವಲಯದಲ್ಲಿ 6,323 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಪ್ರತಿ ದಾಖಲಾತಿಗೆ ಸರಾಸರಿ 15,500 ರೂ., ಸಾರ್ವಜನಿಕ ಆಸ್ಪತ್ರೆಯಲ್ಲಿ 10,042 ರೂ. ನಿಗದಿಪಡಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಮಾರ್ಚ್ 24 ರವರೆಗೆ 14.66 ಕೋಟಿ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗಿದೆ ಮತ್ತು ಒಟ್ಟು 172.48 ಲಕ್ಷ ಆಸ್ಪತ್ರೆ ಪ್ರವೇಶಕ್ಕೆ ಅಧಿಕೃತ ಅನುಮತಿ ನೀಡಲಾಗಿದೆ ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ 2018 ರ ಸೆಪ್ಟೆಂಬರ್ 23 ರಂದು ಪ್ರಾರಂಭವಾಯಿತು. ಇದು ಆಸ್ಪತ್ರೆಗೆ ದಾಖಲಾಗಲು ಬಡ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸುತ್ತದೆ.
ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆಗಳ ಕೊರತೆ ಇರುವುದರಿಂದ ಜನರು ಸರಕಾರಿ ಆಸ್ಪತ್ರೆಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆಂದು ವರದಿ ಬೆಟ್ಟು ಮಾಡಿದೆ.