ಥಾಯ್ಲೆಂಡ್ : ಭಾರತದಲ್ಲಂತೂ ಜಿರಳೆ ಕಂಡರೆ ತಕ್ಷಣ ಹೊಡೆದು ಹಾಕುವವರೇ ಹೆಚ್ಚು. ಆದರೆ ಥಾಯ್ಲೆಂಡ್ನಲ್ಲಿ ಜಿರಳೆಯ ಬಗ್ಗೆ ಮಿಡಿಯುವ ಹೃದಯಗಳಿವೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೌದು, ಏಟುಬಿದ್ದಿದ್ದ ಜಿರಳೆ ಬಗ್ಗೆ ಅನುಕಂಪ ತೋರಿದ ಪುಣ್ಯಾತ್ಮನ ಬಗ್ಗೆ ಥಾಯಿ ಪಶುವೈದ್ಯರೊಬ್ಬರು ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
ರಸ್ತೆಯ ಮೇಲೆ ಏಟುತಿಂದು ಬಿದ್ದಿದ್ದ ಜಿರಳೆಯನ್ನು ವ್ಯಕ್ತಿಯೊಬ್ಬರು ಪಶುವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕರೆದೊಯ್ದಿರುವ ಪ್ರಸಂಗ ನಡೆದಿದೆ. ಈ ಬಗ್ಗೆ ಸಮುತ್ ಸಖೋನ್ ಅನಿಮಲ್ ಹಾಸ್ಪಿಟಲ್ನ ಡಾ. ತನು ಲಂಪಾಪಟ್ಟನವನಿಚ್ ಎಂಬ ಪಶುವೈದ್ಯ ಚಿತ್ರದ ಸಮೇತ ಪೋಸ್ಟ್ ಮಾಡಿದ್ದಾರೆ.
'ನಿನ್ನೆ ರಾತ್ರಿ ಯಾರೋ ರಸ್ತೆಯ ಬದಿಯಲ್ಲಿದ್ದ ಜಿರಳೆಯನ್ನು ತುಳಿದುಬಿಟ್ಟಿದ್ದರು. ಅದರ ಸ್ಥಿತಿಯನ್ನು ನೋಡಿ ಅನುಕಂಪ ಮೂಡಿದ ಸಜ್ಜನರೊಬ್ಬರು ಅದನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರು. ಈಗ ಅದರ ಒದ್ದಾಟ ಅರ್ಧದಷ್ಟು ಕಡಿಮೆಯಾಗಿದೆ' ಎಂದು ಡಾ. ತನು ಥಾಯಿ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, 'ಇದು ತಮಾಷೆಯಲ್ಲ. ಇದು ಪ್ರತಿಯೊಂದು ಜೀವಿಯ ಬಗ್ಗೆಯೂ ಅಂತಃಕರಣ ಹೊಂದಿರಬೇಕೆಂಬುದಕ್ಕೆ ಉದಾಹರಣೆ. ಇಂತಹ ಜನರು ಜಗತ್ತಿನಲ್ಲಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ' ಎಂದು ಬರೆದಿದ್ದಾರೆ.