ಟೆಲ್ ಅವಿವ್: ಇಸ್ರೇಲ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದ್ದು, 12 ವರ್ಷಗಳ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಡಳಿತ ಕೊನೆಗೊಂಡಿದೆ.
ಸಂಸತ್ ನಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚನೆಯ ಪರವಾಗಿ ಮತ ಚಲಾವಣೆಯಾಗಿದ್ದು, ರಾಷ್ಟ್ರೀಯವಾದಿ ನೆಫ್ತಾಲಿ ಬೆನ್ನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇಸ್ರೆಲ್ ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡಪಂಥೀಯ ಅರಬ್ ಯೇತರ ಪಕ್ಷಗಳು, ಸ್ವತಂತ್ರ ಅರಬ್ ಪಕ್ಷ ರಾಮ್ ರಾಷ್ಟ್ರೀಯವಾದಿ ನೆಫ್ತಾಲಿ ಬೆನ್ನೆಟ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದು, ಅನೂಹ್ಯವಾದ ರೀತಿಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಗಳನ್ನು ಹೊಂದಿರುವ ಪಕ್ಷಗಳೇ ಸರ್ಕಾರ ರಚಿಸಿರುವುದು ಅಚ್ಚರಿ ಮೂಡಿಸಿದೆ.
ಅತ್ಯಲ್ಪ ಬಹುಮತ 60-59 ರಿಂದ ಸರ್ಕಾರ ರಚನೆ ಮಾಡಲಾಗಿದ್ದು, ಅಧಿಕಾರ ಹಂಚಿಕೆಯ ಸೂತ್ರದ ಭಾಗವಾಗಿ 2023 ರ ಸೆಪ್ಟೆಂಬರ್ ತಿಂಗಳವರೆಗೂ ನಫ್ತಾಲಿ ಬೆನ್ನೆಟ್ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.
ನಂತರ ನಫ್ತಾಲಿ ಬೆನ್ನೆಟ್ ಅವರು ಇನ್ನೆರಡು ವರ್ಷಗಳ ಆಡಳಿತಾವಧಿಯನ್ನು ಯೆಶ್ ಅಟಿಡ್ ಅವರಿಗೆ ಅಧಿಕಾರ ಬಿಟ್ಟುಕೊಡಲಿದ್ದಾರೆ.
ನೆತನ್ಯಾಹು ದೀರ್ಘಾವಧಿ ಸೇವೆ ಸಲ್ಲಿಸಿದ ಇಸ್ರೆಲ್ ನ ಪ್ರಧಾನಿಯಾಗಿದ್ದು, ಲಿಕುಡ್ ಪಕ್ಷದ ಮುಖ್ಯಸ್ಥರಾಗಿ, ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆ. ಸಂಸತ್ ನಲ್ಲಿ ನಡೆದ ಚರ್ಚೆಯ ವೇಳೆ "ನಾವು ವಾಪಸ್ಸಾಗಲಿದ್ದೇವೆ" ಎಂದು ನೆತನ್ಯಾಹು ಹೇಳಿದ್ದಾರೆ.