ಕೊಚ್ಚಿ: ಲಕ್ಷದ್ವೀಪದಲ್ಲಿ ವಿವಾದಾತ್ಮಕ ಕಾನೂನುಗಳನ್ನು ಜಾರಿಗೆ ತರುವುದಿಲ್ಲ ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಕಾಂತಪುರಂ ವಿಭಾಗದ ಪತ್ರಿಕೆಯಾದ ಸಿರಾಜ್ ನ ಆನ್‍ಲೈನ್ ಆವೃತ್ತಿಯಿಂದ ಈ ಸುದ್ದಿ ವರದಿಯಾಗಿದೆ.
ಅಮಿತ್ ಶಾ ಅವರು ಕಾಂತಪುರಂಗೆ ದೂರವಾಣಿಯಲ್ಲಿ ಕರೆ ಮಾಡಿ ವಿವಾದಾತ್ಮಕ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲ ಎಂದು ಭರವಸೆ ನೀಡಿರುವರು. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಕಾನೂನುಗಳು ದ್ವೀಪವಾಸಿಗಳ ಜೀವನ ಮತ್ತು ಸಂಸ್ಕøತಿಗೆ ಅಪಾಯವನ್ನುಂಟುಮಾಡಿದೆ ಮತ್ತು ಕೇಂದ್ರವು ಮಧ್ಯಪ್ರವೇಶಿಸಬೇಕು ಎಂದು ಕಾಂತಪುರಂ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ವರದಿಯ ಪ್ರಕಾರ, ಅಮಿತ್ ಶಾ ಈ ಕಾರಣದಿಂದ ಕಾಂತಪುರಂಗೆ ಕರೆ ಮಾಡಿದ್ದರು ಎನ್ನಲಾಗಿದೆ.
ಪತ್ರದಲ್ಲಿ ತಿಳಿಸಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಕೇಂದ್ರವು ಲಕ್ಷದ್ವೀಪದ ಜನರೊಂದಿಗೆ ಇದೆ. ಚಿಂತೆ ಮಾಡುವ ಅಗತ್ಯವಿಲ್ಲ ಮತ್ತು ಜನರ ಸಂಸ್ಕೃತಿ ಮತ್ತು ಜೀವನ ವಿಧಾನದ ರಕ್ಷಣೆಗಾಗಿ ಕೇಂದ್ರವು ಜೊತೆಗಿದೆ ಎಂದು ಅಮಿತ್ ಶಾ ಹೇಳಿರುವರು. ಜನರ ಇಚ್ಚೆಗೆ ವಿರುದ್ಧವಾಗಿ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಅಮಿತ್ ಶಾ ಹೇಳಿರುವರೆಂದು ತಿಳಿದುಬಂದಿದೆ.