ಕೊಚ್ಚಿ: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷದ್ವೀಪ ಮೂಲದ ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾ, ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಲಕ್ಷದ್ವೀಪದ ಜನರ ವಿರುದ್ಧ ಕೇಂದ್ರವು ಕೋವಿಡ್ ಸಾಂಕ್ರಾಮಿಕ ರೋಗವನ್ನು 'ಜೈವಿಕ ಅಸ್ತ್ರ'ವನ್ನಾಗಿ ಬಳಕೆ ಮಾಡುತ್ತಿದೆ ಎಂದು ಟಿ.ವಿ ಚರ್ಚೆಯೊಂದರಲ್ಲಿ ಆಯಿಷಾ ಆರೋಪಿಸಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.
ಲಕ್ಷದ್ವೀಪದ ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ನೀಡಿದ ದೂರಿನ ಅನ್ವಯ ಕವರತ್ತಿ ಪೊಲೀಸಲು ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 123ಎ (ದೇಶದ್ರೋಹ) ಮತ್ತು ಸೆಕ್ಷನ್ 153ಬಿ (ದ್ವೇಷ ಭಾಷಣ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳಿಂದಲೂ ಆಯಿಷಾಗೆ ಬೆಂಬಲ ವ್ಯಕ್ತವಾಗಿತ್ತು.
ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ.ಪಟೇಲ್ ಜನ ವಿರೋಧಿ ನೀತಿಯಿಂದಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಪ್ಟಿಯಾಗಿದ್ದು, ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.