ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ನಿರ್ವಹಣೆ ಹೊಣೆ ಹೊತ್ತುಕೊಂಡಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿರುದ್ಧ ಗಂಭೀರ ಭೂಹಗರಣದ ಆರೋಪ ಕೇಳಿ ಬಂದಿದೆ.
ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಈ ಟ್ರಸ್ಟ್‌ನ ಮೂಲಕ ಮಾಡಲಾಗುತ್ತಿದೆ. ಇದರಲ್ಲಿ 15 ಮಂದಿ ಸದಸ್ಯರಿದ್ದು ಇದರಲ್ಲಿ 12 ಮಂದಿ ಸದಸ್ಯರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
''ಆಸ್ತಿ ಖರೀದಿಯಲ್ಲಿ ಸುಮಾರು 16. 5ಕೋಟಿ ರು ಅವ್ಯವಹಾರ ನಡೆದಿದೆ,'' ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಆರೋಪಿಸಿದ್ದರು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ವಿಹೆಚ್‌ಪಿ ನಾಯಕ ಚಂಪತ್ ರಾಯ್ ಆರೋಪ ಅಲ್ಲಗೆಳೆದಿದ್ದರು.
ಆದರೆ ಈಗ ಇನ್ನೂ ಎರಡು ಭೂ ಖರೀದಿ ಅವ್ಯವಹಾರ ನಡೆದಿದೆ ಎಂದು ಇಂಡಿಯಾ ಟುಡೇ ದಾಖಲೆ ಸಮೇತ ವರದಿ ಮಾಡಿದೆ. 47 ಲಕ್ಷ ರು ಮೌಲ್ಯದ ಸ್ವತ್ತನ್ನು ರಾಮಜನ್ಮಭೂಮಿ ಟ್ರಸ್ಟ್ ಗೆ 3.5 ಕೋಟಿ ರುಗೆ ಮಾರಾಟ ಮಾಡಲಾಗಿದೆ. ಎರಡು ಪ್ಲಾಟ್ ಗಳಿದ್ದು, 20 ಹಾಗೂ 27 ಲಕ್ಷ ರು ಮೌಲ್ಯದ್ದಾಗಿದೆ. ಇದನ್ನು ಕ್ರಮವಾಗಿ 2.5 ಕೋಟಿ ರು ಹಾಗೂ 1 ಕೋಟಿ ರು ಗೆ ಮಾರಾಟ ಮಾಡಲಾಗಿದೆ.
ವ್ಯವಹಾರ ನಡೆದಿದ್ದು ಹೇಗೆ?:
ಇಂಡಿಯಾ ಟುಡೇಗೆ ಲಭ್ಯವಾದ ಕಾಗದ ಪತ್ರದ ಪ್ರಕಾರ ಫೆಬ್ರವರಿ 20, 2021ರಂದು ಅಯೋಧ್ಯ ಮೇಯರ್ ಋಷಿಕೇಶ್ ಉಪಾಧ್ಯಾಯ್ ಅವರ ಸೋದರಳಿಯ ದೀಪ್ ನಾರಾಯಣನ್ ಎಂಬುವರು 890 ಚದರಡಿ ಭೂಮಿ ವ್ಯವಹಾರ ನಡೆಸಿದ್ದಾರೆ. ಆಚಾರ್ಯ ಮಹಂತ ದೇವೇಂದ್ರ ಪ್ರಸಾದ್ ಎಂಬುವರು ಖಾತಾ ನಂಬರ್ 135ರಲ್ಲಿರುವ ಸಾದರ್ ತೆಹ್ಸಿಲ್ ಹವೇರಿ ಅವಧ್ ಕೋಟ್ ರಾಮಚಂದ್ರದಲ್ಲಿರುವ ಸದರಿ ಭೂಮಿಯನ್ನು 20 ಲಕ್ಷಕ್ಕೆ ಮಾರಿದ್ದಾರೆ. ಆದರೆ, ಈ ಜಾಗದ ಮಾರುಕಟ್ಟೆ ಬೆಲೆ 35. 6 ಲಕ್ಷ ರು ಇದೆ.
ಮೇ 11ರಂದು ಈ ಭೂಮಿಯನ್ನು 2.5 ಕೋಟಿ ರು ಗೆ ಮಾರಿದ್ದಾರೆ. 4,000 ರು ಪ್ರತಿ ಚದರ ಮೀಟರ್ ಮಾರುಕಟ್ಟೆ ದರವಿದ್ದು, ಟ್ರಸ್ಟ್ ಗೆ 28, 090ರು ಪ್ರತಿ ಚದರ ಮೀಟರ್ ನಂತೆ ಮಾರಾಟ ಮಾಡಲಾಗಿದೆ.
ಇನ್ನೊಂದು ಡೀಲ್ ನಂತೆ ದೀಪ್ ನಾರಾಯಣ್ 676.86 ಚದರ ಮೀಟರ್ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್ ಗೆ ಫೆಬ್ರವರಿ 20ರಂದು ಮಾರಾಟ ಮಾಡಲಾಗಿದ್ದು, ಖಾತೆ ನಂ. 36ಎಂರ ಜಾಗವನ್ನು 1 ಕೋಟಿ ರು ಗೆ ನೀಡಲಾಗಿದೆ. ಇದರ ಮಾರುಕಟ್ಟೆ ಬೆಲೆ 27.08 ಲಕ್ಷ ರು ಇದ್ದು, 4,000ರು ಚದರ ಮೀಟರ್ ನಂತೆ ಬೆಲೆ ಇದೆ. 14, 774 ರು ಪ್ರತಿ ಚದರ ಮೀಟರ್ ನಂತೆ ಹಣ ತೆತ್ತು ಟ್ರಸ್ಟ್ ಇದನ್ನು ಖರೀದಿಸಿದೆ. ಟ್ರಸ್ಟ್ ವತಿಯಿಂದ ಅನಿಲ್ ಮಿಶ್ರಾ ಅವರು ಸಾಕ್ಷಿಯಾಗಿ ಸಹಿ ಹಾಕಿದ್ದಾರೆ.
ಸಮಾಜವಾದಿ ಪಕ್ಷ ನಾಯಕ ಪವನ್ ಪಾಂಡೆ, ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಈ ಭೂ ಅವ್ಯವಹಾರವನ್ನು ಸಿಬಿಐಗೆ ವಹಿಸಿ ಸೂಕ್ತ ತನಿಖೆ ನಡೆಸಬೇಕು, ತಕ್ಷಣವೇ ಜಾರಿ ನಿರ್ದೇಶನಾಲಯವು ಬ್ಯಾಂಕ್ ಖಾತೆ ಜಪ್ತಿ ಮಾಡಬೇಕು ಆಗ್ರಹಿಸಿದ್ದಾರೆ.