ಲಂಡನ್: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಮೂಲದ ಶೋಧ ವೇಗ ಪಡೆದುಕೊಂಡಿದ್ದು, ಬಾವಲಿಗಳಲ್ಲಿ ಮಾತ್ರ ಪ್ರಸರಣ ಸಾಮರ್ಥ್ಯ ಹೊಂದಿದ್ದ ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ ಸಾಮಾರ್ಥ್ಯ ನೀಡಿದ್ದೇ ಚೀನಾ ವಿಜ್ಞಾನಿಗಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೊರೋನಾ ವೈರಸ್ ಹುಟ್ಟಿಕೊಂಡಿದ್ದು ಹೇಗೆ ಎಂಬ ವಿಚಾರ ಇದೀಗ ಮತ್ತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ನಾರ್ವೇ, ಅಮೆರಿಕ ಮತ್ತು ಬ್ರಿಟನ್ ದೇಶದ ಕೆಲ ವಿಜ್ಞಾನಿಗಳು ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ಸಾಕ್ಷಿಗಳನ್ನೂ ಕೂಡ ನೀಡುತ್ತಿದ್ದು, ಕೊರೋನಾ ವೈರಸ್ ನ ರಚನೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ ಅದು ಮಾನವ ಸೃಷ್ಟಿ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಈ ವೈರಸ್ ಮಾನವ ನಿರ್ಮಿತ ಅಲ್ಲ ಎಂದು ಸಾಬೀತು ಮಾಡಲು ವಿಜ್ಞಾನಿಗಳು ರಿವರ್ಸ್ ಇಂಜಿನಿಯರಿಂಗ್ ವರ್ಷನ್‌ನಿಂದ ಟ್ರ್ಯಾಕ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಚೀನಾದ ರೆಟ್ರೋ ಇಂಜಿನಿಯರಿಂಗ್‌ನ ಸಾಕ್ಷಿ ತಮ್ಮ ಬಳಿ ಇದೆ ಎಂದು ವಾದಿಸಿದ್ದಾರೆ.
ಯಾರು ಈ ವಿಜ್ಞಾನಿಗಳು:
ಪ್ರೊ. ಡಲ್ಗಲಿಶ್ ಸೇಂಟ್ ಜಾರ್ಜ್ ಯೂನಿವರ್ಸಿಟಿ ಲಂಡನ್‌ನಲ್ಲಿ ಆಂಕಾಲಜಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ರಿಟಿಷ್ ಪ್ರೊಫೆಸರ್ ಎಂಗುಸ್ ಡಲಿಶ್ ಮತ್ತು ನಾರ್ವೆಯ ಪ್ರಖ್ಯಾತ ಔಷಧ ತಯಾರಿಕಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿ ಡಾ. ಬಿರ್ಗರ್ ಸೊರೇನ್‌ಸೆನ್ ಅವರು ಈ ಗಂಭೀರ ಆರೋಪ ಮಾಡಿದ್ದಾರೆ. ಈ ಕೊರೋನಾ ವೈರಸ್‌ನಲ್ಲಿ ತಮಗೆ ವಿಭಿನ್ನ ಫಿಂಗರ್‌ಪ್ರಿಂಟ್ಸ್ ಲಭ್ಯವಾಗಿದೆ. ಇದರಿಂದ ಈ ವೈರಸ್ ಲ್ಯಾಬ್‌ನಲ್ಲೇ ತಯಾರಿಸಲಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ.
ವೈರಸ್ ಗಳ ಸಾಮರ್ಥ್ಯ ಹೆಚ್ಚಿಸುವ (ಬಾಲ) ಅಮೈನೋ ಆ್ಯಸಿಡ್:
ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ 'ಬಾಲ' (ಅಮೈನೋ ಆ್ಯಸಿಡ್) ಆಕೃತಿಯ ರಚನೆಯನ್ನು ಕೃತಕವಾಗಿ ನೀಡಲಾಗಿದೆ. ಇದು ಜೀವಕೋಶಗಳನ್ನು ವೈರಸ್ ಹಿಡಿದು ಅದೇ ಜೀವಕೋಶಗಳ ಮೂಲಕ ತನ್ನ ಸಂತಾನ ವೃದ್ಧಿಸಿಕೊಂಡು ಕ್ರಮೇಣ ಮಾರಣಾಂತಿಕವಾಗುತ್ತದೆ. ಎಲ್ಲರೂ ಇದು ಬಾವಲಿಯಿಂದ ಹರಡಿದೆ ಎಂಬುವುದನ್ನೇ ಹೇಳಿ ತಮ್ಮ ಸಂಶೋಧನೆಯನ್ನು ಕಡೆಗಣಿಸಿದರು. ಆದರೆ ವಾಸ್ತವವಾಗಿ ಸಾರ್ಸ್ ಕೊರೋನಾ ವೈರಸ್ 2 ಪ್ರಾಕೃತಿಕವಾಗಿ ಆಗಿದ್ದಲ್ಲ, ಪ್ರಯೋಗ ಶಾಲೆಯಲ್ಲೇ ಅಭಿವೃದ್ಧಪಡಿಸಲಾಗಿದೆ. ಈ ವಿಚಾರವಾಗಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ.
ಕೊರೋನಾ ವೈರಸ್ ನಲ್ಲಿ ನಾಲ್ಕು ಅಮೈನೋ ಆ್ಯಸಿಡ್!:
ಕೊರೋನಾ ವೈರಸ್‌ನಲ್ಲಿ ನಾಲ್ಕು ಅಮೈನೋ ಆಮ್ಲಗಳಿವೆ ಎಂಬುವುದನ್ನು ಕಂಡುಕೊಂಡಾಗ ಈ ಬಗ್ಗೆ ಅನುಮಾನ ಮೂಡಿತ್ತು. ಯಾಕೆಂದರೆ ಭೌತಶಾಸ್ತ್ರದ ನಿಯಮಗಳ ಪ್ರಕಾರ, ಧನಾತ್ಮಕ ಆವೇಶದ ನಾಲ್ಕು ಅಮೈನೋ ಆಮ್ಲಗಳು ಒಂದಾಗಿ ಇರಲು ಸಾಧ್ಯವಿಲ್ಲ. ಕೃತಕವಾಗಿ ನಿರ್ಮಿಸಿದಾಗಷ್ಟೇ ಹೀಗಾಗಲು ಸಾಧ್ಯ. ಮಾನವ ಜೀವಕೋಶಗಳಿಗೆ ಅಂಟಿಕೊಂಡರೆ ಇದು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಾಡಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.