ಮಂಗಳೂರು: ಕಳೆದ ಒಂದು ಶತಮಾನದಿಂದ ತುಳುವಿನಲ್ಲಿ ಸಮೃದ್ಧ ಸಾಹಿತ್ಯ ನಿರ್ಮಾಣವಾಗುತ್ತಿದ್ದು ಜಗತ್ತಿನ ಇತರ ಭಾಷೆಗಳಿಗೆ ಸರಿ ಸಮಾನವಾಗಿ ಬೆಳೆದು ನಿಂತಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಕಾರಣದಿಂದಾಗಿ ತುಳುವಿನಲ್ಲಿ ಆಗುತ್ತಿರುವ ಎಲ್ಲ ಚಟುವಟಿಕೆಗಳೂ ವಿಶ್ವ ಸಮುದಾಯದ ಗಮನ ಸೆಳೆಯುತ್ತಿದೆ. ತುಳುವಿನಲ್ಲಿ ಸಮೃದ್ಧ ಸಾಂಸ್ಕøತಿಕ ಪರಂಪರೆ ಇರುವುದು ಮಾತ್ರವಲ್ಲ, ಅದೊಂದು ಸಮರ್ಥ ಸಂವಹನ ಭಾಷೆಯಾಗಿಯೂ ಬೆಳೆದು ನಿಂತಿದೆ ಎಂದು ಕವಿ, ಸಾಹಿತಿ ಹಾಗೂ ಮಾಧ್ಯಮತಜ್ಞ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ತೆಲಂಗಾಣದ ಕಾವ್ಯಕೌಮುದಿ ಸಂಸ್ಥೆಯು ತೆಲಂಗಾಣ ಸಾಹಿತ್ಯ ಅಕಾಡೆಮಿ ಮತ್ತು ಅಲ್ಲಿನ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅಂತರ್ ಜಾಲ ಮೂಲಕ ಏರ್ಪಡಿಸಿದ ಅಂತಾರಾಷ್ಟ್ರೀಯ ಬಹುಭಾಷಾ ಕವಿಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ತುಳು ಭಾಷೆಯ ಬಗ್ಗೆ ಅವರು ವಿಸ್ತೃತವಾದ ಉಪನ್ಯಾಸ ನೀಡಿ, ತುಳು ಸ್ವರಚಿತ ಕವನಗಳನ್ನು ಹಾಗೂ ಅವುಗಳ ಇಂಗ್ಲಿಷ್ ಅನುವಾದವನ್ನು ವಾಚಿಸಿದರು.
ತುಳು ಭಾಷೆಯ ಬಗ್ಗೆ ಇವತ್ತು ಎಲ್ಲೆಡೆ ಎಚ್ಚರ ಮತ್ತು ಜಾಗೃತಿಯ ಸನ್ನಿವೇಶ ಕಂಡು ಬರುತ್ತಿದೆ. ಇದರ ಹಿಂದೆ ಸಾಹಿತಿಗಳ ಮತ್ತು ತುಳು ಚಳವಳಿಗಾರರ ಕೊಡುಗೆ ಇದೆ. ಎಂಟು ಶತಮಾನಗಳಿಂದ ಬೆಳೆದು ಬಂದಿರುವ ತುಳು ಸಾಹಿತ್ಯ ಪರಂಪರೆಯಲ್ಲಿ ಉತ್ತಮ ಸಾಹಿತ್ಯಕೃತಿಗಳ ನಿರ್ಮಾಣ ಆಗಿದೆ ಎಂದು ಡಾ. ಪೆರ್ಲ ಅವರು ಹೇಳಿದರು.
ಭಾರತದ ಹಲವು ರಾಜ್ಯಗಳ ಕವಿಗಳೊಂದಿಗೆ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ದ. ಅಮೆರಿಕ, ಇಟಲಿ, ಕೆನಡಾ, ವಾಷಿಂಗ್ಟನ್ ಡಿ. ಸಿ., ಇಂಡೋನೇಶಿಯಾ, ಮಲೇಶಿಯ, ಮೆಕ್ಸಿಕೋ ಮುಂತಾದ ಮೂವತ್ತಕ್ಕೂ ಅಧಿಕ ರಾಷ್ಟ್ರಗಳ ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವ್ಯಕೌಮುದಿಯ ಅಧ್ಯಕ್ಷೆ ಡಾ. ಕುಮುದ್ ಬಾಲಾ ವಹಿಸಿದ್ದರು. ಕೇರಳದ ಡಾ. ಮಿಲನ್ ಫ್ರಾನ್ಸ್ ಮತ್ತು ಗುವಾಹಟಿಯ ಭಾರತಿ ಹಜಾರಿಕಾ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಶುಮಾನ್ ತಿವಾರಿ ಅವರು ಪ್ರಾರ್ಥಿಸಿದರು. ಕೇರಳದ ರೋಸಿ ಲಿಡಿಯಾ ವಂದಿಸಿದರು.