ಗ್ಯಾಬೋರೋನ್ (ಬೋಟ್ಸ್‌ವಾನಾ): ಬೋಟ್ಸ್‌ವಾನಾದಲ್ಲಿ ಸರ್ಕಾರ ಮತ್ತು ಆಂಗ್ಲೊ ಅಮೆರಿಕನ್ಸ್ ಡೆ ಬೀರ್ಸ್‌ನ ಜಂಟಿ ಸಂಸ್ಥೆಯ ಸಹಭಾಗಿತ್ವದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ವಜ್ರ ಪತ್ತೆ ಹಚ್ಚಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಗಣಿಗಾರಿಕೆ ವೇಳೆಯಲ್ಲಿ 1,098 ಕ್ಯಾರೆಟ್ ವಜ್ರವನ್ನು ಪತ್ತೆ ಹಚ್ಚಲಾಗಿದೆ. ಈ ವಜ್ರವನ್ನು ಬೋಟ್ಸ್‌ವಾನಾ ಅಧ್ಯಕ್ಷರಿಗೆ ಡೈಮಂಡ್ ಕಂಪನಿಯ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಆರ್ಮ್ ಸ್ಟ್ರಾಂಗ್ ಹಸ್ತಾಂತರಿಸಿದರು.
1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಿಶ್ವದ ಅತಿ ದೊಡ್ಡ ವಜ್ರ ಪತ್ತೆ ಹಚ್ಚಲಾಗಿತ್ತು. ಇದು 3,106 ಕ್ಯಾರೆಟ್ ಉತ್ಕೃಷ್ಟ ವಜ್ರವಾಗಿದೆ. 2015ರಲ್ಲಿ ಬೋಟ್ಸ್‌ವಾನಾದಲ್ಲಿ 1,109 ಕ್ಯಾರೆಟ್ 'ಲೆಸೆಡಿ ಲಾ ರೋನ' ವಜ್ರವನ್ನು ಲುಕಾರಾ ಡೈಮಂಡ್ಸ್ ಉತ್ಖನನ ಮಾಡಿತ್ತು. ಇದು ವಿಶ್ವದ ಎರಡನೇ ಅತಿ ದೊಡ್ಡ ವಜ್ರವಾಗಿದೆ.
ಡೆಬ್‌ಸ್ವಾನಾ ತನ್ನ 50 ವರ್ಷಗಳ ಉತ್ಖನನ ಇತಿಹಾಸದಲ್ಲಿ ಪತ್ತೆ ಹಚ್ಚಿದ ಅತಿ ದೊಡ್ಡ ವಜ್ರ ಇದಾಗಿದೆ ಎಂದು ಆರ್ಮ್‌ಸ್ಟ್ರಾಂಗ್ ತಿಳಿಸಿದ್ದಾರೆ.
2020ದಿಂದಲೂ ಕೋವಿಡ್-19 ಸಾಂಕ್ರಾಮಿಕ ರೋಗವು ಡೈಮಂಡ್ ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂತಹ ಕಠಿಣ ಸಮಯದಲ್ಲಿ ವಜ್ರ ಪತ್ತೆಯಾಗಿದ್ದು, ಬಿಕ್ಕಟ್ಟಿನ ಸಮಯದಲ್ಲಿ ನೆರವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಇದು 73ಎಂಎಂ ಉದ್ದ, 52 ಎಂಎಂ ಅಗಲ ಮತ್ತು 27 ಎಂಎಂ ದಪ್ಪವನ್ನು ಹೊಂದಿದೆ.