ಕಾಸರಗೋಡು: ಕೋಡೋಂ -ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಡಿಯನ್ ವಳಪ್ ನದಿಯಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಸಜ್ಜೀಕರಣ ನಡೆಯುತ್ತಿದೆ. ಈ ಮೂಲಕ ಸ್ಥಳೀಯ ಎರುಮಂಗಳಂ-ತಾನ್ನಿಯಾಡಿ ಪ್ರದೇಶಗಳ ನಿವಾಸಿಗಳ ಅನೇಕ ವರ್ಷಗಳ ಕನಸು ನನಸಾಗುತ್ತಿದೆ.
ಸೇತುವೆ ನಿರ್ಮಾಣದ ಕೊನೆಯ ಹಂತದ ಸಣ್ಣಪುಟ್ಟ ಕಾಮಗಾರಿಗಳು ಮಾತ್ರ ಬಾಕಿಯುಳಿದಿವೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯ ನಿರ್ಮಾಣ ನಡೆದಿದೆ. ಎರುಮಂಗಳಂ-ತಾನ್ನಿಯಾಡಿ ರಸ್ತೆಯಲ್ಲಿ ಈ ಹಿಂದೆ ಇದ್ದ ಬಳಕೆಗೆ ಯೋಗ್ಯವಲ್ಲದ, ಅಪಾಯಕಾರಿ ವಿ.ಸಿ.ಬಿ. ಕಂ ಬ್ರಿಜ್ ಗೆ ಪರ್ಯಾಯವಾಗಿ ನೂತನ ಸೇತುವೆ ಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿಬಂದಿತ್ತು.
21.56 ಮೀಟರ್ ನಲ್ಲಿ ಏಕ ಸ್ಪಾನ್ ನಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. 7.5 ಮಿಟರ್ ಅಗಲವಿರುವ ಸಂಚಾರಕ್ಕೆ ಸರ್ವ ಸೌಲಭ್ಯವಿರುವ, ಉಭಯ ಕಡೆಗಳಲ್ಲಿ 1.5 ಮೀಟರ್ ಅಗಲಹೊಂದಿರುವ ಕಾಲ್ನಡಿಗೆ ಹಾದಿ ಇರುವ ಸೇತುವೆ ಇದಾಗಿದೆ. ಟಿ. ಬೀಂ ಸ್ಲಾಬ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಎರಡೂ ಬದಿಗಳಲ್ಲಿ ತತ್ಸಂಬಂಧಿ ರಸ್ತೆಗಳು ಮತ್ತು ಪಾಶ್ರ್ವ ಭಿತ್ತಿಗಳನ್ನು ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಸೇತುವೆ ವಿಭಾಗ ಕಾರ್ಯಕಾರಿ ಇಂಜಿನಿಯರ್ ಯೋಜನೆಯನ್ನು ಜಾರಿಗೊಳಿಸಿದ್ದಾರೆ.
ಸೇತುವೆ ಉದ್ಘಾಟನೆಗೊಂಡ ಮೇಲೆ ಸ್ಥಳೀಯ ನಿವಾಸಿಗಳಿಗೆ, ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಬಹು ಉಪಯೋಗವಾಗಲಿದೆ. ಕೃಷಿ ಮತ್ತು ಉದ್ದಿಮೆ ವಲಯಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟಿದ್ದಾರೆ.
ಈ ಸೇತುವೆಯ ಉದ್ಘಾಟನೆ ಶೀಘ್ರದಲ್ಲಿ ನಡೆಸಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.