ಕಾಸರಗೋಡು: ತಮ್ಮ ಬದುಕಿನ ಬಾಲಪಾಠ ಒದಗಿಸಿದ ವಿದ್ಯಾಲಯದ ಪ್ರವೇಶೋತ್ಸವಕ್ಕೆ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ಮಂಗಳವಾರ ಚಾಲನೆ ನೀಡಿದರು.
ಬಂಗ್ರ ಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರವೇಶೋತ್ಸವವನ್ನು ಅವರು ಆನ್ ಲೈನ್ ರೂಪದಲ್ಲಿ ಉದ್ಘಾಟಿಸಿದರು. ಅಕ್ಷರ ಲೋಕದಲ್ಲಿ ತಲ್ಲೀನರಾಗಿದ್ದ ಅವಧಿಯಲ್ಲೇ ಎರಡು ಬಾರಿ ಶಾಲಾ ನಾಯಕರಾಗಿದ್ದ ನೆನಪನ್ನೂ ಅವರು ಈ ವೇಳೆ ಹಂಚಿಕೊಂಡರು. ನೂತನ ಪುಟಾಣಿಗಳನ್ನೂ ಅವರು ಕಲಿಕಾ ಪ್ರಪಂಚಕ್ಕೆ ಸ್ವಾಗತಿಸಿದರು.
ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಿ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ಖಾದರ್, ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಟಿ.ಆರ್.ಷಮೀನಾ, ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಜೀನ್ ಮೊಂಥೆರೋ, ಬ್ಲೋಕ್ ಪಂಚಾಯತ್ ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಷಂಸೀನಾ, ಮಂಜೇಶ್ವರ ಎ.ಇ.ಒ. ವಿ.ದಿನೇಶ, ಮಾತೃಸಂಘ ಅಧ್ಯಕ್ಷೆ ಆಸ್ಮಾ, ಸಿ.ಗಾಯತ್ರಿ, ಎಂ.ವಿ.ಬಿಂದು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಎ.ಸುನಿತಾ ಸ್ವಾಗತಿಸಿದರು. ಸ್ಟಾಫ್ ಸೆಕ್ರಟರಿ ಎ.ಪ್ರತಿಭಾ ವಂದಿಸಿದರು.