ನವದೆಹಲಿ: ದೇಶದ ಕಟ್ಟಕಡೆಯ ಹಳ್ಳಿಗೂ ಕೋವಿಡ್ ಲಸಿಕೆ ಮತ್ತು ಔಷಧಗಳನ್ನು ತಲುಪಿಸಲು ಹಾಗೂ ಸಂಚಾರಕ್ಕೆ ಸಾಧ್ಯವಾಗದ ದುರ್ಗಮ ಪ್ರದೇಶಗಳಿಗೆ ಡ್ರೋನ್ ಮೂಲಕ ವೈದ್ಯಕೀಯ ಪರಿಕರಗಳನ್ನು ತಲುಪಿಸುವುದಕ್ಕಾಗಿ ಸರ್ಕಾರ ಅರ್ಜಿಗಳನ್ನು ಆಸಕ್ತರಿಂದ ಅಹ್ವಾನಿಸಿದೆ.
'ಬಿಡ್' ದಾಖಲೆಯಲ್ಲಿ ಉಲ್ಲೇಖಿಸಿರುವಂತೆ, 'ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಕಾನ್ಫುರ್) ಸಹಯೋಗದೊಂದಿಗೆ 'ಮಾನವ ರಹಿತ ವೈಮಾನಿಕ ವಾಹನ(ಯುಎವಿ) ಬಳಸಿಕೊಂಡು, ಯಶಸ್ವಿಯಾಗಿ ಔಷಧ - ಲಸಿಕೆಗಳನ್ನು ತಲುಪಿಸಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು (ಸ್ಟ್ಯಾಂಡರ್ಡ್ ಪ್ರೊಟೊಕಾಲ್) ಅಭಿವೃದ್ಧಿಪಡಿಸಿದೆ.
ಐಸಿಎಂಆರ್ ಪರವಾಗಿ ಎಚ್‌ಎಲ್‌ಎಲ್ ಇನ್ಫ್ರಾ ಟೆಕ್ ಸರ್ವೀಸ್ ಲಿ(ಪ್ರೊಕ್ಯೂರ್‌ಮೆಂಟ್ ಸಪೋರ್ಟ್ ಏಜೆನ್ಸಿ) ಕಂಪನಿ, ಕೇಂದ್ರ ಸಾರ್ವಜನಿಕ ಸಂಗ್ರಹ ಪೋರ್ಟೆಲ್ ಮೂಲಕ ಈ ಅರ್ಜಿಗಳನ್ನು ಆಹ್ವಾನಿಸಿದೆ. ಯುಎವಿ ಮೂಲಕ ವೈದ್ಯಕೀಯ ಪರಿಕರಗಳನ್ನು ಪೂರೈಸುವಲ್ಲಿ (ಲಸಿಕೆ ಮತ್ತು ಔಷಧಗಳು) ಅನುಭವವಿರುವ ಕಂಪನಿಗಳು ಅರ್ಜಿ ಸಲ್ಲಿಸಬಹುದು ಎಂದು ಕಂಪನಿ ತಿಳಿಸಿದೆ.