ಕಳೆದ ವರ್ಷ ವಿಮಾ ಕಂಪನಿಗಳ ನಿಯಂತ್ರಕ ಸಂಸ್ಥೆ ಐಆರ್ಡಿಎ ಕಡಿಮೆ ಪ್ರೀಮಿಯಂನ 'ಕರೊನಾ ಕವಚ್' ಮತ್ತು 'ಕರೊನಾ ರಕ್ಷಕ್' ವಿಮೆ ಪರಿಚಯಿಸುವಂತೆ ನಿರ್ದೇಶಿಸಿತ್ತು. ಬಹಳಷ್ಟು ಜನ ಇವನ್ನು ಖರೀದಿಸಿದ್ದರು. ಆದರೆ, ಕರೊನಾ 2ನೇ ಅಲೆಯ ಅಬ್ಬರಕ್ಕೆ ಇವುಗಳಿಂದ ರಕ್ಷಣೆ ಒದಗುತ್ತಿದೆಯೇ?
ಕೋವಿಡ್ 19 ಎರಡನೇ ಅಲೆ ದೇಶಾದ್ಯಂತ ಸಾಕಷ್ಟು ತಲ್ಲಣವನ್ನೇ ಸೃಷ್ಟಿಸಿದೆ. ಕೋವಿಡ್ ಸೋಂಕಿತರ ಪೈಕಿ ಬಹುತೇಕರ ಭವಿಷ್ಯ ನಿಧಿ ಪಿಂಚಣಿ ಉಳಿತಾಯ ಮತ್ತು ಇತರೆ ಉಳಿತಾಯದ ಹಣವೂ ಕರಗಿದೆ. ಈ ಪೈಕಿ ಒಂದಷ್ಟು ಜನ ಅಲ್ಪಾವಧಿಯ 'ಕರೊನಾ ಕವಚ್', 'ಕರೊನಾ ರಕ್ಷಕ್' ಮುಂತಾದ ನಿಶ್ಚಿತ ಉದ್ದೇಶದ ವಿಮೆಯನ್ನೂ ಮಾಡಿಸಿಕೊಂಡಿದ್ದರು. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾರಣ ಈ ಪೈಕಿ ಅನೇಕರು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದುಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ವಿಮೆ ಕ್ಲೇಮು ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಸಹಜ. ಕರೊನಾ ವಿಮೆಯ ಕುರಿತ ಇತ್ತೀಚಿನ ದತ್ತಾಂಶ ಮತ್ತು ಈ ಕುರಿತ ಆರೋಗ್ಯ ವಿಮಾ ಕ್ಷೇತ್ರದ ಪರಿಣತರ ಅಭಿಪ್ರಾಯಗಳು ಕೂಡ ಪ್ರಕಟವಾಗಿವೆ. ಮನೆಯಲ್ಲೇ ಚಿಕಿತ್ಸೆ ಪಡೆದರೂ ಕರೊನಾ ವಿಮೆ ಸಿಗುತ್ತೆ, ಆದರೆ…?: ಕರೊನಾ ಕವಚ್, ಕರೊನಾ ರಕ್ಷಕ್ ಹಳೆಯ ಪಾಲಿಸಿಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆದುದಕ್ಕೆ ವಿಮಾ ಸುರಕ್ಷೆಯ ಸೌಲಭ್ಯ ಇರಲಿಲ್ಲ. ಆದರೆ, ಹೊಸದರಲ್ಲಿ ನಿಯಮ ಪರಿಷ್ಕರಿಸಲಾಗಿದ್ದು, ಮನೆಯಲ್ಲೇ ಕೋವಿಡ್ ಚಿಕಿತ್ಸೆ ಪಡೆದರೂ ಬಹುತೇಕ ಕರೊನಾ ಕವಚ್, ಕರೊನಾ ರಕ್ಷಕ್ ಯೋಜನೆ ಪ್ರಕಾರ ವಿಮಾ ಸುರಕ್ಷೆ ಸಿಗುತ್ತದೆ. ಎಲ್ಲ ಕಂಪನಿಗಳ ಕರೊನಾ ವಿಮೆಯಲ್ಲೂ ಈ ಸೌಲಭ್ಯ ಇದೆ ಎಂದರ್ಥವಲ್ಲ. ವಿಮಾ ಪಾಲಿಸಿ ಪಡೆಯುವಾಗ ಇದನ್ನೆಲ್ಲ ಗಮನಿಸಬೇಕಾದ್ದು ಅವಶ್ಯ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ವಿಮಾ ಕಂಪನಿಗೆ ತಡಮಾಡದೇ ಈ ವಿಚಾರ ತಿಳಿಸಬೇಕು ಎನ್ನುತ್ತಾರೆ ಆರೋಗ್ಯ ವಿಮಾ ಕ್ಷೇತ್ರದ ಪರಿಣತರು.
ಐಆರ್ಡಿಎ ಸೂಚನೆ ಏನು?: ಕೆಲವು ವಿಮಾ ಕಂಪನಿಗಳು ಕರೊನಾ ಕವಚ್ ಮತ್ತು ಕರೊನಾ ರಕ್ಷಕ್ ಪಾಲಿಸಿಯನ್ನು ಗ್ರಾಹಕರಿಗೆ ಒದಗಿಸುವುದನ್ನು ನಿಲ್ಲಿಸಿವೆ. ಇನ್ನು ಕೆಲವು ಕಂಪನಿಗಳು ಈ ಪಾಲಿಸಿಗಳ ನವೀಕರಣವನ್ನು ನಿರಾಕರಿಸುತ್ತಿವೆ ಎಂಬ ಅಂಶ ಗಮನಕ್ಕೆ ಬಂದಿದೆ. ಕೋವಿಡ್ 19 ಎರಡನೇ ಅಲೆ ತೀವ್ರಗೊಂಡಿರುವ ಕಾರಣ ಇಂತಹ ಸಂಕಷ್ಟ ಸಮಯದಲ್ಲಿ ಸಾರ್ವಜನಿಕರಿಗೆ ವಿಮಾ ರಕ್ಷಣೆಯನ್ನು ಒದಗಿಸಲು ನಿರಾಕರಿಸುವುದು ನ್ಯಾಯಯುತ ನಡೆಯಲ್ಲ ಎಂದು ವಿಮಾ ಕಂಪನಿ ನಿಯಂತ್ರಕ ಸಂಸ್ಥೆ ಐಆರ್ಡಿಎ ಎಚ್ಚರಿಸಿದೆ. ಕಂಪನಿಗಳು ಕ್ಲೇಮ್ ನಿರಾಕರಿಸಿದರೆ ಲಿಖಿತ ರೂಪದಲ್ಲಿ ನಿರಾಕರಣೆ ಪತ್ರ ತೆಗೆದುಕೊಂಡು ಐಆರ್ಡಿಎಗೆ ವಿಮಾ ಕಂಪನಿ ವಿರುದ್ಧ ದೂರು ದಾಖಲಿಸಬಹುದು.
ವಿಮೆ ವ್ಯಾಪ್ತಿಯಲ್ಲಿ ಏನೇನು ಬರುತ್ತದೆ?: ಕೋವಿಡ್ 19 ಸೋಂಕಿತ ರೋಗಿಗೆ ನೀಡುವ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ವಿಮಾ ಸೌಲಭ್ಯದ ಪ್ರಕಾರ ಆಸ್ಪತ್ರೆಗೆ ಪಾವತಿಸಲಾಗುವುದಿಲ್ಲ ಅಥವಾ ರೋಗಿಗೆ ಮರುಪಾವತಿ ಮಾಡಲಾಗುವುದಿಲ್ಲ. ವೈದ್ಯಕೀಯ ವೆಚ್ಚ (ಔಷಧ ವೆಚ್ಚ ಸೇರಿ) ಡಾಕ್ಟರ್ ಶುಲ್ಕ, ಸಿಟಿ ಸ್ಕಾಯನ್ (ಅವಶ್ಯವಾದರೆ), ಎಕ್ಸ್-ರೇ ಮತ್ತು ಇತರೆ ನಿಶ್ಚಿತ ಟೆಸ್ಟ್ಗಳ ವೆಚ್ಚವನ್ನಷ್ಟೇ ವಿಮೆ ಭರಿಸುತ್ತದೆ. ವೈದ್ಯಕೀಯೇತರ ವೆಚ್ಚಗಳಾದ ಪಿಪಿಇ ಕಿಟ್, ಮಾಸ್ಕ್, ಇಂಜೆಕ್ಷನ್ ಸಿರಿಂಜ್, ರೋಗಿಯ ಆಹಾರದ ವೆಚ್ಚ ಮುಂತಾದವುಗಳನ್ನು ಇದರಲ್ಲಿ ಭರಿಸಲಾಗುವುದಿಲ್ಲ.