HEALTH TIPS

ಸಾವಿನ ಬಳ್ಳಿಯೋ? ಜೀವದ ಬಳ್ಳಿಯೋ?

          ಚಿತಾಗಾರಗಳ ಮುಂದೆ ಸಾಲು ಸಾಲು ಮೃತದೇಹಗಳು, ಆಸ್ಪತ್ರೆಗಳ ಮುಂದೆ ಏದುಸಿರು ಬಿಡುವ ರೋಗಿಗಳನ್ನು ಹೊತ್ತುನಿಂತ ಆಂಬುಲೆನ್ಸ್‌ಗಳು, ಆಪ್ತರ ಜೀವ ಉಳಿಸಲು ಪ್ರಾಣವಾಯುವಿಗಾಗಿ ಹಾದಿ ಬೀದಿಯಲ್ಲಿ ಅಂಗಲಾಚುವವರು, ಅಗಲಿದವರ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳ ಮುಂದೆ ದೈನೇಸಿಯಿಂದ ಬೇಡುವವರು... ಕೊರೊನಾ ಬಿಡಿಸಿದ ಚಿತ್ರಗಳು ಎಷ್ಟೊಂದು ಕಠೋರ. ಜೀವನದ ಸಂಧ್ಯಾಕಾಲದಲ್ಲಿದ್ದ ಹಿರಿಯ ಜೀವವೊಂದು ಯುವಕನಿಗೆ ಬೆಡ್‌ ಬಿಟ್ಟುಕೊಟ್ಟು ಪ್ರಾಣತ್ಯಾಗ ಮಾಡಿದ್ದು, ಚಿನ್ನಾಭರಣಗಳನ್ನು ಒತ್ತೆ ಇಟ್ಟ ದಂಪತಿ, ರೋಗಿಗಳಿಗೆ ನೂರಾರು ಫ್ಯಾನ್‌ಗಳನ್ನು ತಂದು ಕೊಟ್ಟಿದ್ದು ಅಳುವ ಕಡಲಿನಲ್ಲಿ ತೇಲಿಬಂದ ಮಾನವೀಯತೆಯ ಪುಟ್ಟ ಹಾಯಿದೋಣಿಗಳು. ಹೌದು, ಇಷ್ಟೊಂದು ಅಬ್ಬರಿಸಿ ಬೊಬ್ಬಿಡುತ್ತಿರುವ ಕೊರೊನಾ ಅಲೆ ನಮ್ಮನ್ನೆಲ್ಲ ಎಲ್ಲಿಗೆ ಹೋಗಿ ಮುಟ್ಟಿಸೀತು? ಮಾನವೀಯತೆಯ ತಂತು ಹೇಗೆ ಉಳಿದೀತು?

           '...Water, water, everywhere, Nor any drop to drink'

ಸ್ಯಾಮುಯೆಲ್ ಟೇಲರ್ ಕೋಲ್‍ರಿಡ್ಜ್ ಕವಿಯ ಪ್ರಸಿದ್ಧ 'ದ ರೈಮ್ ಆಫ್ ದ ಏನ್‍ಶಿಯಂಟ್ ಮ್ಯಾರಿನರ್' ಕವಿತೆಯ ಈ ಸಾಲುಗಳು (ನೀರೇ ನೀರೇ ಎಲ್ಲೆಲ್ಲೂ/ ಕುಡಿಯಲು ಹನಿಯಿಲ್ಲ) ಮತ್ತೆ ಮತ್ತೆ ನೆನಪಾಗುತ್ತಿವೆ. ಕವಿತೆಯಲ್ಲಿ ಸಮುದ್ರದ ನಡುವಿನಲ್ಲಿ, ಹಡಗಿನ ಒಡಲಿನಲ್ಲಿ ಹಲವು ದಿನಗಳನ್ನು ಕಳೆಯಬೇಕಾದ ನಾವಿಕರಿದ್ದಾರೆ. ಬಾಯಾರಿಕೆ. ಸುತ್ತಲೂ ನೀರಿದೆ. ಆದರೆ ಅದನ್ನು ಕುಡಿಯುವಂತಿಲ್ಲ. ನಮ್ಮ ಸ್ಥಿತಿಯೂ ಹಾಗೆಯೇ ಆಗಿದೆ. ಸುತ್ತಮುತ್ತಲೂ ಗಾಳಿಯ ಹರಹು. ಆದರೆ ಅತ್ಯಗತ್ಯವಾದ ಪ್ರಾಣವಾಯುವಿನ ಕೊರತೆಯಿಂದ ಜನ ಸಾಯುತ್ತಿದ್ದಾರೆ.

               ಆ ಕವಿತೆಯ ನಾವಿಕನ ಹೆಗಲ ಮೇಲೆ ಹಕ್ಕಿಯನ್ನು ಕೊಂದ ಪಾಪಪ್ರಜ್ಞೆಯು ಭಾರವಾಗಿ ಕುಳಿತು ಕಾಡುತ್ತದೆ. ಆದರೆ ನಮ್ಮನ್ನು ನಾವು ಮಾಡಿದ ಪಾಪವೂ ಕಾಡುತ್ತಿಲ್ಲ. ಬೇರೆಯವರು ಮಾಡಿದ ಪಾಪವೂ ಕಾಡುತ್ತಿಲ್ಲ. ಇದು ಕಮೂನ 'ದ ಪ್ಲೇಗ್' ಕಾದಂಬರಿಯ ಫಾದರ್ ಪೆನೆಲೊ ಹೇಳಿದ 'ದೇವರ, ಧರ್ಮದ ವಿರುದ್ಧ ಮಾಡಿದ ಪಾಪವಲ್ಲ', ಬದಲಾಗಿ, ಮುಂದಿನ ಪೀಳಿಗೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಎಲ್ಲವನ್ನೂ ನಾಶ ಮಾಡುತ್ತಿರುವ ನಮ್ಮೆಲ್ಲರ ಅಪರಾಧ. ಹಾಗೆಂದು ಕೊರೊನಾಗೂ ಈ ತಪ್ಪಿಗೂ ನೇರ ಸಂಬಂಧವಿದೆಯೇ? ಅದು ಕೂಡ ನಿಜವಲ್ಲ. ಇಷ್ಟಕ್ಕೂ ಅಪರಾಧ ಯಾರದು, ಶಿಕ್ಷೆ ಯಾರಿಗೆ? 'ಇದೆಲ್ಲದರ ಅರ್ಥವೇನು?' ಎಂಬ ಉತ್ತರವಿಲ್ಲದ ಪ್ರಶ್ನೆ ಆಗೀಗ ಬಂದು ಸೋಂಕಿ ಹೋಗುತ್ತಿದೆ.

ಇದು ಗತಿಯಿಲ್ಲದವರ ಮಹಾವಲಸೆಯ ಕಾಲ. 'ಆಯ್ಕೊಂಡು ತಿನ್ನೋ ಕೋಳಿಗೆ ಕಾಲು ಮುರಿದರು' ಅಂತ ಗಾದೆ. ಅಂದಂದಿನ ದುಡಿಮೆ ಅಂದಂದಿಗೆ ಎಂದು ಬದುಕುವವರ ವಲಸೆ ಇದು. ಮನೆಯಲ್ಲಿದ್ದರೆ ಹಸಿವಿನಿಂದ ಸಾಯಬೇಕು, ಹೊರಗೆ ಹೋದರೆ ಸೋಂಕು ಹತ್ತಿ ಸಾಯಬಹುದು. ಎರಡನೆಯದೇ ವಾಸಿ ಎನ್ನುವ ಹತಾಶ ಪರಿಸ್ಥಿತಿ ಹಲವರದ್ದು. ಸಾವಿನ ಭೀತಿ ದೊಡ್ಡದೋ, ಜೀವದ ಆಸೆ ಹಿರಿದೋ? ಹೇಗೆ ತಾನೇ ಹೇಳುವುದು?

          ಮನೆಯೊಳಗೆ ಹೆಣ ಇಟ್ಟುಕೊಂಡು ಬಾಳು ನಡೆಸುತ್ತಿರುವ ಹಾಗಾಗಿದೆ ಕಾಲದ ಸ್ಥಿತಿ. ಪ್ರತಿಕ್ಷಣ ಸಾವಿನ ತುತ್ತು ಉಣ್ಣುವ ಅನುಭವ. ಇದ್ದಕ್ಕಿದ್ದಂತೆ ನೂರಾರು ಜನ ನಮ್ಮ ಕಣ್ಣ ಮುಂದೆಯೇ ಕರಗಿ ಹೋದರು, ಹೋಗುತ್ತಿದ್ದಾರೆ. ಯಾರಿದ್ದಾರೆ, ಯಾರಿಲ್ಲ ಅನ್ನುವ ವ್ಯತ್ಯಾಸವೇ ಅಳಿಸಿ ಹೋದಂತಿರುವ ವಿಚಿತ್ರ ತಲ್ಲಣ. ಬೇರೆಯವರನ್ನು ಕೊಲ್ಲಲು ಸದಾ ಸಿದ್ಧನಿರುವ, ಅದಕ್ಕೆಂದೇ ಹಲವು ಶಸ್ತ್ರಗಳು, ಮಾರ್ಗಗಳನ್ನು ರೂಪಿಸುವ ಮನುಷ್ಯನನ್ನು ತನ್ನನ್ನು ಕೊಲ್ಲುವ, ಆದರೆ ತಾನು ಸುಲಭವಾಗಿ ಮಣಿಸಲಾಗದ, ಕೊಲ್ಲಲಾಗದ ಈ ರೋಗ ಒಂದೆಡೆ ಕಾಡುತ್ತಿದೆ.

            ಇನ್ನೊಂದೆಡೆ, ಕುಂಭಮೇಳ, ಚುನಾವಣಾ ಪ್ರಚಾರದಂತಹ ಹುಚ್ಚು ಸಂತೆಗಳಿಗೆ, ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಜೀವದ ಜೊತೆಗೆ ಆಟವಾಡುವ ರಾಜಕಾರಣದ ದುಷ್ಟತನ; 'ತಾಳಕ್ಕೆ ತಕ್ಕಂತೆ ಮೇಳ' ಅನ್ನುವ ಹಾಗೆ ಜನರ ವರ್ತನೆ; ಉರಿಯೋ ಮನೆಯಲ್ಲಿ ಗಳ ಹಿರಿದರು ಅನ್ನುವಂತೆ, ಇಂತಹ ಸ್ಥಿತಿಯಲ್ಲೂ ಆಂಬುಲೆನ್ಸ್, ಔಷಧಿ, ಆಸ್ಪತ್ರೆ ಹೆಸರಿನಲ್ಲಿ ಸುಲಿಗೆ ಮಾಡುವ ಕರಾಳ ದಂಧೆ; 'ಏ..ನಮಗೆಲ್ಲ ಕೊರೊನಾ ಬರೋದಿಲ್ಲ' ಅನ್ನುವ ಉಡಾಫೆಯಲ್ಲಿ ಮಾಸ್ಕ್, ದೈಹಿಕ ಅಂತರ ಮರೆತು ಅಡ್ಡಾದಿಡ್ಡಿ ಓಡಾಡುವ ಮಂದಿ; ಈ ಯಾವುದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಲಕ್ಷಾಂತರ ರೂಪಾಯಿ ವ್ಯಯಿಸಿ ನಡೆಯುತ್ತಲೇ ಇರುವ ರಿಯಾಲಿಟಿ ಶೋಗಳು; ಹೊರದೇಶದ ಮೋಜಿನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾಚಿಕೆಯಿಲ್ಲದೆ ಹಂಚಿಕೊಳ್ಳುವ ಸಿನಿಮಾ ಮಂದಿಯನ್ನು ನೋಡಿದರೆ ಉರಿವ ದೀಪಕ್ಕೆ ದೀಪದ ಹುಳುವು ತಾನೇ ಹೋಗಿ ಸುಟ್ಟುಕೊಂಡ ಹಾಗನ್ನಿಸುತ್ತದೆ.

            ಸಂಕಟದ ಹೊತ್ತಿನಲ್ಲೇ ಮನುಷ್ಯನ ಕ್ರೌರ್ಯ ಕಡಿಮೆ ಆಗಬಹುದು/ಆಗಬೇಕು ಎನ್ನುವಂತಲ್ಲಿ ಅದು ದುಪ್ಪಟ್ಟು ಬೆಳೆದು ನಿಂತಿದೆ ಅಂದರೆ ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಏನೆಂದು, ಯಾರಿಗೆ ಮೊರೆಯಿಡುವುದು ಈ ಸಂದಿಗ್ಧ ಸ್ಥಿತಿಯಲ್ಲಿ? ಸತ್ವಪರೀಕ್ಷೆಯ ಅಗ್ನಿ ಎಲ್ಲವನ್ನೂ ಸುಟ್ಟು ಪುಟವಿಕ್ಕಲೆಂದೇ? ಎಲ್ಲರ ಸಂಕಟ ತಪ್ಪಲೆಂದೇ? ಹಾ! ಹೀಗಾದದ್ದೇ ಒಳ್ಳೆಯದು, ಜನರಿಗೆ ಬುದ್ಧಿ ಬರಲೆಂದೇ? ಅಥವಾ... ಮನುಷ್ಯ ಮನುಷ್ಯನಾಗಲೆಂದೇ?

            ಪು.ತಿ.ನ. ಅವರ 'ಒಂದಿರುಳು' ಕವಿತೆಯಲ್ಲಿ, 'ಪಡುಬಡಗಲ ಮೂಲೆಯಲ್ಲಿ/ಕಾಳಿಯಿರುವ ತಾಣದಲ್ಲಿ/ಕಿಚ್ಚು ಇರುಳ ನೊಣೆಯುತಿತ್ತು,/ಭಯವು ಮೂಡಿ ಮಸಗುತಿತ್ತು,/ಜೀವ ಹೌಹಾರುತಿತ್ತು,/ಡುಮ್ಮಿ ಡುಕಿಟಿ ನಾನ ತತ್ತು/ಎನುತ ತಮಟೆ ದುಡಿಯುತಿತ್ತು/ತನುವೊಳಾದ ಬೇನೆಗಾಗಿ/ವಿಶ್ವಜೀವ ಮೂಕವಾಗಿ/ವಿಣ್ಣ ವಿಣ್ಣ ದುಡಿವ ತೆರದಿ,/ಗಾಯಗೊಂಡ ತಾಣದಿ' ಎಂಬ ಸಾಲುಗಳಿವೆ.

ಕವಿತೆಯಲ್ಲಿ, ವಿಶ್ವದ ಯಾವುದೋ ಒಂದು ಮೂಲೆಯಲ್ಲಿ ಚೆನ್ನನೆಂಬ ಅಸ್ಪೃಶ್ಯನು ತಮಟೆಯ ನುಡಿಸುತ್ತಿದ್ದಾನೆ. ಆ ಸದ್ದಿಗೆ ವಿಶ್ವದ ಜೀವ ಮೂಕವಾಗಿ 'ವಿಣ್ಣ ವಿಣ್ಣ' ಎಂದು ತುಡಿಯುತ್ತಿದೆ. ಚೆನ್ನನೊಳಗಿನ 'ಮುಟ್ಟಿಸಿಕೊಳ್ಳಲಾಗದ' ನೋವು ಮತ್ತು ಅದನ್ನು ಧ್ವನಿಸುವ ತಮಟೆಯ ಕಂಪನವು ಇಡೀ ವಿಶ್ವಜೀವಕ್ಕೆ ಆಗುತ್ತಿರುವ ನೋವು. ವಿಶ್ವದ ಯಾವುದೋ ಮೂಲೆಯಲ್ಲಿ ಅಥವಾ ಊರಿನಾಚೆಯ ಹೊರಗೇರಿಯಲ್ಲಾದದ್ದು ಎಂದು ಇದನ್ನು ನಾವು ಸುಲಭಕ್ಕೆ ಬಿಡಲಾಗುವುದಿಲ್ಲ. ಅಸ್ಪೃಶ್ಯತೆಯೆಂಬುದು ಇಡೀ ಸಮಾಜಕ್ಕೆ ಅಂಟಿಕೊಂಡ ಗಾಯ. ಅದು ವಾಸಿಯಾಗುವ ತನಕ ಸಮಾಜ ಆರೋಗ್ಯವಂತವಾಗಲಾರದು. ತಮಟೆಯ ತುಡಿತವು 'ಸಮಾಜ' ಅನ್ನುವ ಶರೀರದ ತುಡಿತ ಎನ್ನುವುದು ಕವಿತೆಯ ಧ್ವನಿ. ದೇಹದ ಯಾವುದೋ ಒಂದು ಜಾಗಕ್ಕೆ ಆದ ನೋವು ಇಡೀ ಶರೀರಕ್ಕೇ ಆದ ನೋವು ತಾನೆ?

          ...ಎಲ್ಲರ ನೋವು ನನ್ನ ನೋವೇ ಎಂದು ಮಿಡಿಯದ ಜೀವಗಳ ಸಂಖ್ಯೆಯು ಇಂದು ಹೆಚ್ಚುತ್ತಿದೆ, ಕೊರೊನಾ ಸೋಂಕು ಮನುಷ್ಯನ ದೇಹಕ್ಕೆ ಮಾತ್ರವಲ್ಲ, ಆತ್ಮಸಾಕ್ಷಿಗೂ ತಟ್ಟಿ ಅದನ್ನು ಕೊಲ್ಲುತ್ತಿದೆ ಅನ್ನಿಸಿ ಭಯ ಕಾಡತೊಡಗಿ... ಜೀವವು ಕವಿತೆಯನ್ನು ಆತುಕೊಂಡಾಗ...

ಗೆಲ್ಲುಗೆಲ್ಲಿಗೂ ಕುಡಿಯೊಡೆದು
ಕಣ್ಣ ಹೋಲುವ ಎಲೆ ಎಲೆಯ
ಮೆದು ದಂಟಿನ ಹಂಬು

ಹಬ್ಬುತ್ತಲೇ ಹೋಗುತ್ತಿದೆ
ಕಿರುಕೊಂಬೆಗಳ ಕೈಚಾಚಿ,
ಎತ್ತೆತ್ತಲೋ ಒಂದೊಂದು ಹೂವಿನ
ಫಲವತ್ತನೂರುತ್ತ ಏರುತ್ತ.

ನಡುನಡುವೆ ಹಣ್ಣು ಎಲೆಗಳಲ್ಲಲ್ಲಿ,
ಆಗೊಮ್ಮೆ ಈಗೊಮ್ಮೆ ನಿನ್ನಂತೆ ನಾನೂ ಅನ್ನಿಸುವ ನಿನ್ನ
ಏನೆಂದು ಕರೆಯಲಿ ಸಖಿ?
ಸಾವಿನ ಬಳ್ಳಿಯೆಂದೋ? ಜೀವದ ಬಳ್ಳಿಯೆಂದೋ?

ನಿನ್ನ ತೆಕ್ಕೆಗಳುದ್ದಕ್ಕೂ ಮೂಡುವ ಚಿಗುರಿಗೆ ಜೀವ
ಸಾವಿನ ಬಳ್ಳಿಯೆಂದರೆ,
ಅವೇ ಚಿಗುರು ಸಾವಾಗಿ ಕಾಣುವ ವಿಸ್ಮಯ
ಜೀವದ ಬಳ್ಳಿಯೆಂದರೆ.


                             (ಚಿತ್ರ: ಲಬನಿ ಜಾಂಗಿ, ಕೃಪೆ: ಪೀಪಲ್ಸ್‌ ಆರ್ಕೈವ್‌ ಆಫ್‌ ರೂರಲ್‌ ಇಂಡಿಯಾ)


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries