ಕಾಸರಗೋಡು: ವಾಚನಾ ದಿನಾಚರಣೆ ಜೂ.19ರಂದು ನಡೆಯಲಿದ್ದು, ಕಾಸರಗೋಡು ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. 19ರಿಂದ ಐ.ವಿ.ದಾಸ್ ಸ್ಮರಣಾರ್ಥ ಪಕ್ಷಾಚರಣೆಯೂ ನಡೆಯಲಿದೆ.
ವಾಚನಾ ದಿನಾಚರಣೆ ಆರಂಭಿಸಿ 26 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 26 ಕೃತಿಗಳ ಬಗ್ಗೆ 26 ಶಬ್ದಗಳಲ್ಲಿ ಸಂಕ್ಷಿಪ್ತವಾಗಿ ವಿಮರ್ಶಿಸುವ ಸ್ಪರ್ಧೆ ಈ ಬಾರಿಯ ಆಕರ್ಷಣೆಯಾಗಿದೆ. ಆನ್ ಲೈನ್ ಮೂಲಕ ಸ್ಪರ್ಧೆ ಜರುಗಲಿದ್ದು, ವಯೋಮಿತಿ ವ್ಯತ್ಯಾಸವಿಲ್ಲದೆ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗಿಗಳಾಗಲು ಅರ್ಹರಾಗುವರು. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆಯುವವರಿಗೆ ಸ್ಮರಣಿಕೆ ಮತ್ತು ಅರ್ಹತಾಪತ್ರ ವಿತರಿಸಲಾಗುವುದು. ಹಿರಿಯ ಸಾಹಿತಿಗಳು ಸೇರಿರುವ ಸಮಿತಿ ತೀರ್ಪು ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ ಸಂಘಟಕ ಸಮಿತಿ ರಚಿಸಲಾಗಿದೆ. ಈ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್, ಡಿ.ಡಿ.ಇ. ಕೆ.ವಿ.ಪುಷ್ಪಾ, ಪಿ.ಎನ್.ಪಣಿಕ್ಕರ್ ಫೌಂಡೇಷನ್ ಜಿಲ್ಲಾ ಸಮಿತಿ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಸಂಚಾಲಕ ಸಿ.ಸುಕುಮಾರನ್, ಉಪಾಧ್ಯಕ್ಷ ಕೆ.ವಿ.ರಾಘವನ್, ಜಿಲ್ಲಾ ಸಾಕ್ಷರತಾ ಮಿಷನ್ ಸಂಚಾಲಕ ಶ್ರೀಜನ್ ಪುನ್ನಾಡ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನ್ ಎಂ., ಕಿರಿಯ ವರಿಷ್ಠಾಧಿಕಾರಿ ಶೆಲ್ವರಾಜನ್ ಮೊದಲಾದವರು ಉಪಸ್ಥಿತರಿದ್ದರು.