ನವದೆಹಲಿ: ವಿಶ್ವ ಯೋಗ ದಿನವಾದ ಇಂದು ಭಾರತದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಒಂದೇ ದಿನದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕಿಸಿದ್ದು, ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.
ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಅಭಿಯಾನ ನೀಡಲು ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಘೋಷಿಸಿದಂತೆಯೇ ಇಂದು ಬೃಹತ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಅಭಿಯಾನದ ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ಲಸಿಕೆ ಹಾಕಿಸುವ ಗುರಿ ಇರಿಸಿಕೊಂಡಿರುವ ಭಾರತ ಸರ್ಕಾರ, ಲಸಿಕೆ ಹಾಕಲೆಂದೇ 1 ಲಕ್ಷಕ್ಕೂ ಅಧಿಕ ವ್ಯಾಕ್ಸಿನೇಟರ್ಗಳನ್ನು ನಿಯೋಜಿಸಿದೆ. ಒಟ್ಟಿನಲ್ಲಿ ಇಂದು ಸಂಜೆ 5 ಗಂಟೆವರೆಗೆ 75 ಲಕ್ಷ ಜನರಿಗೆ ಲಸಿಕೆ ಹಾಕಿಸಲಾಗಿದೆ. ಅದರಲ್ಲೂ ದೇಶದಲ್ಲಿ ನಡೆಯುತ್ತಿರುವ ಲಸಿಕೆ ಹಾಕಿಸುವ ಪ್ರಕ್ರಿಯೆಯ ಉತ್ತುಂಗದ ಅವಧಿಯಲ್ಲಿ ಒಮ್ಮೆಯಂತೂ ಒಂದು ಸೆಕೆಂಡ್ನಲ್ಲಿ 30,000 ಲಸಿಕೆಯನ್ನು ಹಾಕಿದಂತಾಗಿದೆ ಎಂದು ಸರ್ಕಾರದ ಅಧಿಕೃತ ಮೂಲ ತಿಳಿಸಿದೆ.
ಮತ್ತೊಂದೆಡೆ ಸರ್ಕಾರದ ಈ ಬೃಹತ್ ಲಸಿಕೆ ಅಭಿಯಾನದ ಯಶಸ್ಸಿನ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ 5 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನ್ಯೂಜಿಲೆಂಡ್ನ ಜನಸಂಖ್ಯೆಯ ಒಂದೂವರೆ ಪಟ್ಟು ಮಂದಿಗೆ ಭಾರತದಲ್ಲಿ ಲಸಿಕೆ ಹಾಕಿಸಲಾಗಿದೆ. ಇನ್ನೂ ನಾಲ್ಕು ಗಂಟೆ ಅವಧಿ ಉಳಿದಿದ್ದು, ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.